ಜೈಲಿನಿಂದ ಬಿಡುಗಡೆ:ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ ಡಿಕೆಶಿ
ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
48 ದಿನಗಳ ಜೈಲು ವಾಸದ ನಂತರ ದೆಹಲಿ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ಇಂದು ಷರತ್ತುಬದ್ಧ ಜಾಮೀನ ನೀಡಿದ್ದು, ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಂಕಷ್ಟದ ಸಮಯದಲ್ಲಿ ನನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮೆಲ್ಲರ ಶುಭ ಹಾರೈಕೆಯಿಂದ ನನಗೆ ಜಾಮೀನು ಸಿಕ್ಕಿದೆ. ನನ್ನ ಪರ ಹೋರಾಟ ನಡೆಸಿದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ವಕೀಲರಿಗೆ ಕೃತಜ್ಞತೆಗಳು ಎಂದರು. ಅಲ್ಲದೆ ನಾಳೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.
ಡಿಕೆಶಿ ಅವರನ್ನು ಸ್ವಾಗತಿಸಲು ಬೆಂಗಳೂರು ಗ್ರಾಮಾಂತರ ಸಂಸದ, ಸಹೋದರ ಡಿಕೆ ಸುರೇಶ್ ಹಾಗೂ ಹಲವಾರು ಬೆಂಬಲಿಗರು ಆಗಮಿಸಿದ್ದರು. ಮಾಜಿ ಸಚಿವ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರ ವಿಜಯೋತ್ಸವ ಮುಗಿಲುಮುಟ್ಟಿತು.
ದೆಹಲಿ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಡಿಕೆಶಿ ಅವರಿಗೆ ಜಾಮೀನು ನೀಡಿದ್ದು, ಅಗತ್ಯ ಬಿದ್ದರೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.