ಕಾರ್ಕಳ ಗರ್ಭಿಣಿಗೆ ಚಿಕಿತ್ಸೆ ನಿರಾಕರಣೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಉಡುಪಿ: (ಉಡುಪಿ ಟೈಮ್ಸ್ ವರದಿ) ಕಾರ್ಕಳದ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ಹೆರಿಗೆಗೆಂದು ಬಂದಿದ್ದ ಮಹಿಳೆಯೊಬ್ಬರಿಗೆ ಆಸ್ಪತ್ರೆಗೆ ಸೇರಿಸಿಕೊಳ್ಳದೆ, ಹಿಂದಕ್ಕೆ ಕಳುಹಿಸಿದ ಘಟನೆ ಅಮಾನವೀಯ ಮತ್ತು ಖಂಡನೀಯ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂತಹ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ವೈದ್ಯಕೀಯ ಸೇವೆಗಳು ಅಬಾಧಿತವಾಗಿ ನಡೆಯಬೇಕೆಂಬುದು ನಿಯಮ. ಅದಕ್ಕೆ ಸರಿಯಾಗಿ ಈ ದಿನಗಳಲ್ಲಿ ಎದುರಾಗಿರುವ ಕೋರೋನ ಮಹಾಮಾರಿಯನ್ನು ಹೊಡೆದುರುಳಿಸುವಲ್ಲಿ ಅದೆಷ್ಟೋ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಗಳು ತಮ್ಮ ಜೀವದ ಹಂಗುತೊರೆದು ಕಾರ್ಯಪ್ರವತ್ತರಾಗಿ ರುವುದನ್ನು ನಾವು ತಿಳಿದುಕೊಂಡಿದ್ದೇವೆ. ಹೀಗಿರುವಾಗ ಕಾರ್ಕಳ ಆಸ್ಪತ್ರೆಯ ವೈದ್ಯರ ಈ ತೆರನಾದ ವರ್ತನೆಯು ಇಡೀ ವೈದ್ಯ ಲೋಕವನ್ನೇ ತಲೆತಗ್ಗಿಸುವಂತೆ ಮಾಡಿದೆ.
‘ವೈದ್ಯೋ ನಾರಾಯಣ ಹರಿ’ ಎಂಬಂತೆ ವೈದ್ಯರನ್ನು ಭಗವಂತನ ರೂಪದಲ್ಲಿ ಕಾಣುವಾಗ, ಕಾರ್ಕಳದ ವೈದ್ಯರು ಒಬ್ಬ ಮಹಿಳೆಯ ಅದರಲ್ಲೂ ತುಂಬು ಗರ್ಭಿಣಿ ಮಹಿಳೆಯ ಬಗ್ಗೆ ನಿರ್ದಯವಾಗಿ ವರ್ತಿಸಿದ್ದು ಅತ್ಯಂತ ಖಂಡನೀಯ ಸಂತ್ರಸ್ತ ಗರ್ಭಿಣಿ ಮಹಿಳೆ ಸಹಾಯಕ್ಕಾಗಿ ವಿನಂತಿಸಿಕೊಂಡಾಗ, ನಂ 1 ಶಾಸಕರೆಂದು ಕರೆಸಿಕೊಳ್ಳುವ ಕಾರ್ಕಳದ ಶಾಸಕರು ಅವರ ವಿನಂತಿಯನ್ನು ಕಿವಿಗೆ ಹಾಕಿಕೊಳ್ಳದೆ ಕಟುವಾಗಿ ವರ್ತಿಸಿದ್ದು ಯಾಕೆ ? ಅವರು ಒಬ್ಬ ತಾಯಿಯ ಮಗನಲ್ಲವೇ ? ಹೆರಿಗೆ ಅನ್ನೋದು ಯಾವುದೇ ಕಾರಣಕ್ಕಾಗಿ ಮುಂದೂಡುವ ವಿಷಯವಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆಯು ಶಾಸಕರಲ್ಲಿ ಇಲ್ಲವಾಯಿತೇ ?ಕೋರೋನ ವಿಚಾರದಲ್ಲಿ ಅತ್ಯಂತ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಜಿಲ್ಲಾಧಿಕಾರಿಗಳ ಹೆಗಲಿಗೆ ಹೆಗಲು ಕೊಟ್ಟು ದುಡಿದಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಆಗ್ರಹಿಸಿದ್ದಾರೆ.