ಕರ್ನಾಟಕಕ್ಕೆ ಪ್ರವೇಶ ನಿರಾಕರಣೆ: ವೃದ್ಧೆ ಸಾವು, ಆ್ಯಂಬುಲೆನ್ಸ್ ನಲ್ಲೆ ಹೆರಿಗೆ
ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಮೊಮ್ಮಗಳ ಮನೆಯಲ್ಲಿದ್ದ ಬಂಟ್ವಾಳ ನಿವಾಸಿ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಕರೆತಂದಿದ್ದ ಆ್ಯಂಬುಲೆನ್ಸ್ ಗೆ ಶನಿವಾರ ಪೊಲೀಸರು ರಾಜ್ಯದ ಗಡಿ ಪ್ರವೇಶಿಸಲು ತಡೆಯೊಡ್ಡಿದ್ದು, ವಾಪಸ್ ತೆರಳಿದ್ದ ರೋಗಿ ಅಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಮಂಜೇಶ್ವರ, ಉದ್ಯಾವರ ಮಾಡ ಎಂಬಲ್ಲಿರುವ ತನ್ನ ಮೊಮ್ಮಗಳ ಮನೆಗೆ ತರೆಳಿದ್ದರು. ಶನಿವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದರು. ಅಲ್ಲಿಯೇ ಚಿಕಿತ್ಸೆ ಕೊಡಿಸಲು ಕುಟುಂಬದ ಸದಸ್ಯರು ಶನಿವಾರ ಸಂಜೆ ಆಂಬುಲೆನ್ಸ್‌ನಲ್ಲಿ ಮಂಗಳೂರಿನತ್ತ ಕರೆತಂದಿದ್ದರು.
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಕೇರಳ ರಾಜ್ಯವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಪ್ರಯಾಣಿಕ ವಾಹನ ಸಂಚಾರ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆಂಬುಲೆನ್ಸ್‌ಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಯೊಳಕ್ಕೆ ಬಿಡುತ್ತಿಲ್ಲ. ಅವರನ್ನು ಕರೆ ತಂದ ಆಂಬುಲೆನ್ಸ್ ಅನ್ನು ತಲಪಾಡಿ ಗಡಿಯಲ್ಲಿ ತಡೆದ ಪೊಲೀಸರು, ವಾಪಸ್ ಕಳುಹಿಸಿದ್ದರು. ಬೇರೆ ಮಾರ್ಗಗಳಲ್ಲಿ ಮಂಗಳೂರಿಗೆ ಬರಲು ಆಂಬುಲೆನ್ಸ್ ಚಾಲಕ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ರೋಗಿಯನ್ನು ಮಾಡದಲ್ಲಿರುವ ಮೊಮ್ಮಗಳ ಮನೆಗೆ ವಾಪಸ್ ಕರೆದೊಯ್ಯಲಾಗಿತ್ತು. ಭಾನುವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ.
ಕುಂಜತ್ತೂರಿನಲ್ಲಿ ವಾಸವಿರುವ ಬಿಹಾರ ಪಾಟ್ನಾ ಮೂಲದ ಗುರಿಯಾ ದೇವಿ ಎಂಬ ಗರ್ಭಿಣಿಗೆ ಶುಕ್ರವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ತಲಪಾಡಿ ತಲುಪಿದಾಗ ಅಲ್ಲಿದ್ದ ಪೊಲೀಸರು ತಡೆದರು. ಎಷ್ಟೇ ಮನವಿ ಮಾಡಿಕೊಂಡರು ಅವರು ಅವಕಾಶ ನೀಡಲಿಲ್ಲ. ಆ ಬಳಿಕ 35 ಕಿಲೋ ಮೀಟರ್ ದೂರದ ಕಾಸರಗೋಡು ಜನರಲ್ ಆಸ್ಪತ್ರೆ ಗೆ ದಾಖಲಿಸಲು ಕೊಂಡೊಯ್ಯುವಷ್ಟರಲ್ಲಿ ಮೊಗ್ರಾಲ್ ತಲುಪುತ್ತಿದ್ದಂತೆ ಗುರಿಯಾ ಹೆಣ್ಣು ಮಗುವಿಗೆ ಹೆರಿಗೆ ಆಗಿದೆ ಎಂದು ಅಂಬ್ಯುಲೆನ್ಸ್ ಚಾಲಕ ಹೇಳಿದ್ದಾರೆ.