ನಳಿನ್ ಭವಿಷ್ಯ ನುಡಿಯುವ ಮೊದಲು ತಮ್ಮ ಪಕ್ಷದ ಸಾಧನೆ ಅವಲೋಕಿಸಿ: ಕೊಡವೂರು

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಖಾಲಿಯಾಗದೇ ಪ್ರಸ್ತುತ ದಿನೇಶ್ ಗುಂಡೂರಾವ್ ಕಾರ್ಯ ನಿರ್ವಹಿಸುತ್ತಿರುವಾಗ ನೂತನ ಅಧ್ಯಕ್ಷರನ್ನು ಯಾವಾಗ ಘೋಷಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. 135 ವರ್ಷ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮುಖಂಡರಿದ್ದಾರೆ. ಅದು ಕಾಂಗ್ರೆಸ್‌ಗೆ ಹೆಮ್ಮೆ ಕೂಡಾ. ಮುಖಂಡತ್ವದಲ್ಲಿ ಪೈಪೋಟಿ ಬೆಳೆದಾಗ ಮಾತ್ರ ಸಂಘಟನೆ ಪ್ರಾಬಲ್ಯ ಹೊಂದುವುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.


ಬಿಜೆಪಿ ಮಾತ್ರ ಓಡುತ್ತಿರುವ ನೌಕೆ ಎನ್ನುವ ನಳಿನ್ ಕುಮಾರ್‌ರ ಹೇಳಿಕೆಗೆ ಆ ನೌಕೆಯು ಚಲಾಯಿಸಲು ಜನವಿಲ್ಲದೆ ದಡದಲ್ಲಿ ತೇಲುತ್ತಿತ್ತು ಆದರೆ ಅಧಿಕಾರ ದಾಹ ಹಾಗೂ ಭ್ರಷ್ಟಾಚಾರ ಮೂಲಕ ಕಾಂಗ್ರೆಸ್‌ನ 14 ಮತ್ತು ಜೆಡಿಎಸ್‌ನ 3 ಶಾಸಕರನ್ನು ಖರೀದಿಸಿ ಆ ನೌಕೆಯೊಂದಿಗೆ ಬಿಜೆಪಿ ಎಡವುತ್ತಾ ಸಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆ ಹೊರತುಪಡಿಸಿ ದೇಶದಲ್ಲಿ ನಡೆದ ಎಲ್ಲಾ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿ ಕೇವಲ11 ರಾಜ್ಯಗಳಲ್ಲಿ ಮಾತ್ರ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಮಹಾರಾಷ್ಟ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿ ಅಧಿಕಾರ ಕಳೆದುಕೊಂಡಿದೆ. ಕಟೀಲ್‌ರವರು ಕಾಂಗ್ರೆಸ್ ಸಾಧನೆ ಹಾಗೂ ಭವಿಷ್ಯವನ್ನು ನುಡಿಯುವ ಮೊದಲು ತಮ್ಮ ಪಕ್ಷದ ಸಾಧನೆಯನ್ನು ಒಮ್ಮೆ ಅವಲೋಕಿಸಿಕೊಳ್ಳಲಿ.

ಕಾಂಗ್ರೆಸಿಗೆ ಸಂಘಟನೆ ಮಾಡಲು ಈಗ ಜನರು ಸಿಗುತ್ತಿಲ್ಲ ಎಂಬ ಬಿಜೆಪಿ ಮುಖಂಡರ ಹೇಳಿಕೆ ಹಾಸ್ಯಾಸ್ಪದ. ಪಕ್ಷದ ಸಂಘಟನೆಗೆ ಒತ್ತು ನೀಡಿ ಈಗಾಗಲೇ ಬೂತ್ ಸಮಿತಿ ರಚಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಧಿಕಾರ ದಾಹ, ಭ್ರಷ್ಟಾಚಾರ, ಅಪರೇಷನ್ ಕಮಲಗಳಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆದಿರಬಹುದು. ಅಭಿವೃದ್ಧಿ ಚಿಂತನೆ ಮರೆತು ಭಾವನಾತ್ಮಕವಾಗಿ ಜನತೆಯನ್ನು ಮೋಡಿ ಮಾಡುವ ಕಾರ್ಯಕ್ರಮಗಳು ನಿರಂತರವಾಗಿ ಜನತೆಯ ಮೇಲೆ ಪ್ರಭಾವ ಬೀರದು. ಬಿಜೆಪಿಯ ಅಜೆಂಡ ಏನಿದೆ ಎಂಬುದು ಜನತೆಗೆ ಅರಿವಾಗ ತೊಡಗಿದೆ ಇದರಿಂದಲೇ ದೇಶದೆಲ್ಲೆಡೆ ಪ್ರತಿಭಟನೆ ಭುಗಿಲೇಳುತ್ತಿದೆ. ಬಿಜೆಪಿ ಜನರ ಮನಸ್ಸನ್ನು ಈಗಾಗಲೆ ಛಿದ್ರಗೊಳಿಸಿ ಎಲ್ಲರನ್ನೂ ಸಂಶಯದ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿದೆ.


ಭ್ರಷ್ಟಾಚಾರದಿಂದ ಕಾಂಗ್ರೆಸ್ ಪಾತಾಳಕ್ಕೆ ಕುಸಿದಿದೆ ಎನ್ನುವ ಬಿಜೆಪಿ ಅಧ್ಯಕ್ಷರ ಹೇಳಿಕೆ ಬಾಲಿಷ. ಅಧಿಕಾರ ಪಡೆಯಲು ಬಿಜೆಪಿಗೆ ಸಂಖ್ಯಾಬಲದ ಕೊರತೆ ಇದ್ದರೂ ಅಧಿಕಾರ ದಾಹದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರನ್ನು ಖರೀದಿಸಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆಯಲಿಲ್ಲವೇ? ಇದಕ್ಕೆ ಭ್ರಷ್ಟಾಚಾರ ಎನ್ನದೆ ಏನೆನ್ನಬೇಕು? ಸಿದ್ಧರಾಮಯ್ಯನವರು ಯಾವಾಗಲು ನಿದ್ರಿಸುತ್ತಿರುತ್ತಾರೆ ಎನ್ನುವ ಕಟೀಲ್‌ರ ಹೇಳಿಕೆ ಅಸಮಂಜಸ. ಮನುಷ್ಯ ಸರಿಯಾಗಿ ನಿದ್ರೆ ಮಾಡಿದಾಗ ಮಾತ್ರ ಒಳ್ಳೆಯ ಆಲೋಚನೆಯೊಂದಿಗೆ ಸರಿಯಾಗಿ ಕೆಲಸ ಮಾಡಲು ಸಾದ್ಯ. ಇಲ್ಲದೇ ಹೋದಲ್ಲಿ ಆತ ಶೀಘ್ರ ತನ್ನ ಮನಸ್ಥಿತಿಯನ್ನು ಕಳೆದುಕೊಳ್ಳುತ್ತಾನೆ. ಕಾಂಗ್ರೆಸ್ ಪಕ್ಷ ಕೂಡಾ ಜಿಲ್ಲೆಯಲ್ಲಿ ಎಲ್ಲಾ ಪಂಚಾಯತ್ ಸದಸ್ಯರನ್ನು ಹೊಂದಿದ್ದ ಕಾಲ ಇತ್ತು. ಆದರೆ ರಾಜಕೀಯ ನಿಂತ ನೀರಲ್ಲ. ಜನರನ್ನು ಭಾವನಾತ್ಮಕವಾಗಿ ಸೆಳೆಯುವಲ್ಲಿ ಬಿಜೆಪಿ ತಾತ್ಕಾಲಿಕ ಮುನ್ನಡೆ ಗಳಿಸಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅದು ತಿರುಗು ಬಾಣವಾಗುವುದರಲ್ಲಿ ಸಂಶಯವಿಲ್ಲ ಎಂದು ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!