ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿ: ಕಲ್ಕಡ್ಕ ಪ್ರಭಾಕರ ಭಟ್ ವಿರುದ್ಧ ಕೇಸು ದಾಖಲು
ಮಂಗಳೂರು: ಶಾಲೆಯಲ್ಲಿ ನಡೆದ ಕ್ರೀಡೋತ್ಸವದ ವೇಳೆ ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿ ಮಾಡಿದ್ದಕ್ಕಾಗಿ ಆರ್ಎಸ್ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪಿಎಫ್ಐ ಕಲ್ಲಡ್ಕ ವಲಯ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಎಂಬುವವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಲ್ಕಡ್ಕ ಪ್ರಭಾಕರ ಭಟ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಲ್ಕಡ್ಕ ಪ್ರಭಾಕರ ಭಟ್, ಶಾಲಾ ಸಂಚಾಲಕ ನಾರಾಯಣ ಸೋಮಯಾಜಿ, ವಸಂತ ಮಾಧವ, ಚೆನ್ನಪ್ಪ ಕೋಟ್ಯಾನ್ ಮತ್ತು ಶಾಲಾ ಪ್ರಾಂಶುಪಾಲರ ವಿರುದ್ಧ ದೂರು ದಾಖಲಾಗಿದೆ.
ಬಂಟ್ವಾಳದಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆದಿದ್ದ ಶಾಲಾ ಮಕ್ಕಳ ಕ್ರೀಡೋತ್ಸವದ ವೇಳೆ ಬಾಬರಿ ಮಸೀದಿ ಧ್ವಂಸ ಘಟನೆಯನು ವಿದ್ಯಾರ್ಥಿಗಳು ಒಂದು ಸ್ಕಿಟ್ ಮೂಲಕ ಮರುಸೃಷ್ಟಿ ಮಾಡಿದ್ದರು.ಕ್ರಿಡೋತ್ಸವದಲ್ಲಿ ಪುದುಚೇರಿ ಉಪ ರಾಜ್ಯಪಾಲೆ ಕಿರಣ್ ಬೇಡಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಎಸಿಬಿ ಐಜಿ ಚಂದ್ರಶೇಖರ್, ದ.ಕ ಜಿಲ್ಲಾ ಎಸ್ಪಿ ಲಕ್ಷ್ನೀಪ್ರಸಾದ್ ಇನ್ನೂ ಹಲವು ಗಣ್ಯರು ಹಾಜರಿದ್ದು ಅವರೆಲ್ಲರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ.
ಇನ್ನು ವಿವಾದದ ಸಂಬಂಧ ಮಾತನಾಡಿದ್ದ ಪ್ರಭಾಕರ ಭಟ್ “ಬಾಬರಿ ಮಸೀದಿ ಧ್ವಂಸ ಒಂದು ಐತಿಹಾಸಿಕ ಘಟನೆ ಅದನ್ನ ನಾಟಕದ ಸ್ವರೂಪದಲ್ಲಿ ತೋರಿಸುವುದುಅರಲ್ಲಿ ತಪ್ಪೇನಿದೆ? ತಮ್ಮನ್ನು ಕಂಡರಾಗದವರು ಕ್ರೀಡೋತ್ಸವ ಕಾರ್ಯಕ್ರಮದ ಒಂದು ತುಣುಕನ್ನು ತೋರಿಸಿ ಕೋಮು ಸೌಹಾರ್ದತೆ ಕೆದಕುವ ಯತ್ನ ನಡೆಸಿದ್ದಾರೆ” ಎಂದಿದ್ದಾರೆ