ಗೋದ್ರಾ ರೈಲಿಗೆ ಬೆಂಕಿ ಪ್ರಕರಣದ ನಂತರದ ಘಟನೆ ನೆನಪಿಸಿಕೊಳ್ಳಿ: ಖಾದರ್ ಗೆ ಎಚ್ಚರಿಸಿದ ಸಿ.ಟಿ. ರವಿ

ಬೆಂಗಳೂರು: ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ ರಾಜ್ಯ ಹೊತ್ತಿ ಉರಿಯಲಿದೆ ಎಂಬ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ, ಗೋದ್ರಾದಲ್ಲಿ ರೈಲಿಗೆ ಬೆಂಕಿ ಹಾಕಿದ ಪ್ರಕರಣದ ನಂತರದ ಘಟನೆಗಳನ್ನು ಅವರು ಒಮ್ಮೆ ನೆನಪಿಸಿಕೊಳ್ಳಲಿ ಎಂದು ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವದ ವಿಚಾರದಲ್ಲಿ ನಮಗೆ ಬೆದರಿಕೆ ಹಾಕಬೇಡಿ, ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಕೆ ಹಾಕಲಿ. ನಮಗೂ ಸಹನೆಯಿದೆ. ಇದನ್ನೇ ದೌರ್ಬಲ್ಯ ಎಂದು ಭಾವಿಸಬಾರದು ಎಂದು ಖಾದರ್‌ ಅವರಿಗೆ ಸಚಿವ ಸಿ.ಟಿ. ರವಿ ಅವರು ತಿರುಗೇಟು ನೀಡಿದರು.

ಪೌರತ್ವ ತಿದ್ದುಪಡಿ ವಿಷಯದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಾವು ಸಹನೆ ಮತ್ತು ಮೌನದಿಂದಲೇ ಗಮನಿಸುತ್ತಿದ್ದೇವೆ. ನಮ್ಮ ತಾಳ್ಮೆಯನ್ನು ಅವರು ಪರೀಕ್ಷಿಸಬಾರದು, ನಾವು ಬೀದಿಗೆಳೆದರು ನಿಮ್ಮ ಗತಿ ಏನಾಗುತ್ತದೆ ಎಂಬುದರ ಬಗ್ಗೆ ನೀವೇ ಆಲೋಚಿಸಿಕೊಳ್ಳಿ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.

ದೇಶದಲ್ಲಿ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗುತ್ತದೆ. ಆದರೆ ನುಸುಳುಕೋರರು ಮತ್ತು ಅಕ್ರಮಕಾರರಿಗೆ ಅಲ್ಲ. ಖಾದರ್ ಅವರು ಪಾಕಿಸ್ತಾನದಿಂದ ಭಾರತಕ್ಕೆ ನೆಂಟರನ್ನು ಕರೆದುಕೊಂಡು ಬಂದರೆ, ಅವರಿಗೆಲ್ಲಾ ಪೌರತ್ವ ನೀಡುವ ಪ್ರಶ್ನೆಯೇ ಇಲ್ಲ. ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿರುವವರೆಗೆ ತಕ್ಕಪಾಠ ಕಲಿಸುತ್ತೇವೆ. ಯು.ಟಿ. ಖಾದರ್ ಸೇರಿದಂತೆ ಅಂತಹವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕಾಗುತ್ತದೆ ಎಂದು ಹೇಳಿದರು.

ನೂರಾರು ಕೋಟಿ ರೂ.ಗಳ ಅವ್ಯವಹಾರಕ್ಕೆ ಕಾರಣವಾಗಿರುವ ಇಂದಿರಾ ಕ್ಯಾಂಟೀನ್ ನನ್ನು ಮುಚ್ಚುವುದೇ ಲೇಸು. ಒಂದು ವೇಳೆ ಅದನ್ನು ಸರ್ಕಾರದಿಂದ ನಡೆಸುವುದಾದರೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಡಬೇಕು, ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಲೂಟಿ ಮಾಡಿದ ಹಣದಿಂದ ಅದನ್ನು ನಡೆಸಲಿ ಎಂದು ಸಿ.ಟಿ. ರವಿ ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ ಆರಂಭಿಸಲಾದ ಇಂದಿರಾ ಕ್ಯಾಂಟೀನ್ ಅವ್ಯವಹಾರಕ್ಕೆ ನಾಂದಿ ಹಾಡಿದ್ದು, ಸಾರ್ವಜನಿಕರ ಹಣ ಪೋಲಾಗುತ್ತಿದೆ. ಕಾಂಗ್ರೆಸ್ ನವರು ಕ್ಯಾಂಟೀನ್ ನಡೆಸುವುದಾದರೆ ರಾಜೀವ್ ಗಾಂಧಿ ಹೆಸರಿಡಲಿ, ನಾನ್ ವೆಜ್ ಮಾಡಲಿ ಸೋನಿಯಾ, ರಾಹುಲ್ ಗಾಂಧಿ ಹೆಸರು ಇಡಲಿ, ನಮ್ಮದೇನು ಅಭ್ಯಂತರವಿಲ್ಲ ಎಂದು ವ್ಯಂಗ್ಯವಾಡಿದರು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷರಾಗಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಅಪಸ್ಪರ ಎತ್ತಿರುವವರು ಸಂಕುಚಿತ ಮನಸ್ಸಿನವರು. ನಿಯೋಜಿತ ಸಮ್ಮೇಳನಾಧ್ಯಕ್ಷರು ಕೇವಲ ಕಲಬುರಗಿ ಜಿಲ್ಲೆ ಕುರಿತಂತೆ ಸಾಹಿತ್ಯ ರಚನೆ ಮಾಡಿಲ್ಲ. ಅವರು ಇಡೀ ರಾಜ್ಯದ ಸಾಂಸ್ಕೃತಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

error: Content is protected !!