ರಿಯಲ್‌ ಎಸ್ಟೇಟ್ ಕುಸಿತ: ಸಿಮೆಂಟ್‌ ಉತ್ಪಾದನೆ ಶೇ.30ರಷ್ಟು ಕಡಿತ

 ಕಲಬುರ್ಗಿ: ರಿಯಲ್‌ ಎಸ್ಟೇಟ್ ಉದ್ಯಮದಲ್ಲಿನ ಸತತ ಕುಸಿತದಿಂದಾಗಿ ಜಿಲ್ಲೆಯ ಪ್ರಮುಖ ಸಿಮೆಂಟ್‌ ಕಾರ್ಖಾನೆಗಳು ಒಟ್ಟು ಸಾಮರ್ಥ್ಯದಲ್ಲಿ ಸರಾಸರಿ ಶೇ 30ರಷ್ಟು ಉತ್ಪಾದನೆ ಕಡಿತಗೊಳಿಸಿವೆ.

ಸೇಡಂನಲ್ಲಿರುವ ಪ್ರಮುಖ ಸಿಮೆಂಟ್‌ ಕಾರ್ಖಾನೆಯೊಂದು ಪ್ರತಿನಿತ್ಯ ಸರಾಸರಿ 12 ಸಾವಿರ ಟನ್‌ ಸಿಮೆಂಟ್‌ ಉತ್ಪಾದಿಸುತ್ತಿತ್ತು. ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ 18 ಸಾವಿರ ಟನ್‌ ಉತ್ಪಾದಿಸಿ ದಾಖಲೆ ಮಾಡಿತ್ತು. ಆದರೆ, ಮೂರು ತಿಂಗಳಿನಿಂದ ನಿತ್ಯ  8 ಸಾವಿರ ಟನ್‌ ಮಾತ್ರ ಉತ್ಪಾದಿಸಲಾಗುತ್ತಿದೆ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಕಾರ್ಖಾನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಾಡಿಯಲ್ಲಿರುವ ಕಾರ್ಖಾನೆಯೊಂದು ಕಳೆದ ಮಾರ್ಚ್‌ನಲ್ಲಿ 3.5 ಲಕ್ಷ ಟನ್‌ ಉತ್ಪಾದನೆ ಮಾಡಿತ್ತು. ಆಗಸ್ಟ್‌ನಲ್ಲಿ 1.75 ಲಕ್ಷ ಟನ್‌ ಮಾತ್ರ ಉತ್ಪಾದಿಸಿದೆ. ಇಲ್ಲಿನ ಸಿಮೆಂಟ್‌ಗೆ ಪಕ್ಕದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆರ್ಥಿಕ ಕುಸಿತ ಹಾಗೂ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಿಂದಾಗಿ ಗೂಡ್ಸ್‌ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದೂ ಮತ್ತೊಂದು ಕಾರಣ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.

‘ಆರ್ಥಿಕ ಹಿಂಜರಿತದ ಬಿಸಿ ಜಿಲ್ಲೆಯ ಉದ್ಯಮಗಳಿಗೂ ತಟ್ಟಲಾರಂಭಿಸಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಹಾಗೂ ಮೊದಲಿನಷ್ಟು ಬೇಡಿಕೆ ಇಲ್ಲದ ಕಾರಣ ಸಿಮೆಂಟ್‌ ಉತ್ಪಾದನೆ ಕಡಿತಗೊಳಿಸುತ್ತಿವೆ’ ಎನ್ನುತ್ತಾರೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಅಧ್ಯಕ್ಷ ಅಮರನಾಥ ಸಿ. ಪಾಟೀಲ.

‘ರಿಯಲ್‌ ಎಸ್ಟೇಟ್‌ ಉದ್ಯಮ ಮೂರು ವರ್ಷಗಳಿಂದ ಚೇತರಿಕೆ ಕಂಡಿಲ್ಲ. ಇದರ ಬಿಸಿ ಸಿಮೆಂಟ್‌, ಸ್ಟೀಲ್‌ ಉದ್ಯಮಗಳಿಗೂ ತಾಗುತ್ತಿದೆ. ಸರ್ಕಾರ ತುರ್ತು ಪರಿಹಾರ ಕ್ರಮಗಳನ್ನು ಪ್ರಕಟಿಸ ಬೇಕು’ ಎಂಬುದು ಅವರು ಒತ್ತಾಯ.

‘ಸೇಡಂನಲ್ಲಿರುವ ಅಲ್ಟ್ರಾ ಟೆಕ್‌ (ರಾಜಶ್ರೀ) ಸಿಮೆಂಟ್‌ ಕಾರ್ಖಾನೆ ತನ್ನ ಹಳೆಯ ಎರಡು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದೆ. ನೂತನ ಎರಡು ಘಟಕಗಳಲ್ಲಿ ಬೇಡಿಕೆ ಆಧರಿಸಿ ಉತ್ಪಾದಿಸುತ್ತಿದೆ’ ಎಂದು ಕಾರ್ಮಿಕ ಮುಖಂಡ ಎಸ್‌.ಕೆ. ಕಾಂತಾ ಹೇಳಿದರು.

ಕಾರ್ಖಾನೆಯ ಉತ್ಪಾದನೆ ಕಡಿತದ ವಿವರ ಬಹಿರಂಗವಾದರೆ ಮಾರಾಟದ ಮೇಲೆ ದುಷ್ಪರಿಣಾಮ ಬೀರಬಹುದು  ಎಂಬ ಭೀತಿಯಿಂದ ಹೆಚ್ಚಿನ ಕಾರ್ಖಾನೆಯವರು ಪ್ರತಿಕ್ರಿಯಿಸಲಿಲ್ಲ.

ನಷ್ಟ ಭರ್ತಿಗೆ ಸಿಬ್ಬಂದಿ ಕಡಿತ
ಸಿಮೆಂಟ್‌ಗೆ ಬೇಡಿಕೆ ಕುಸಿಯುತ್ತಿದ್ದಂತೆ ಸಿಬ್ಬಂದಿ ಕಡಿತಕ್ಕೆ ಮುಂದಾಗಿರುವ ಕಾರ್ಖಾನೆಗಳು, ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿಯಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದುಕೊಳ್ಳುತ್ತಿವೆ.

‘ರಾಜೀನಾಮೆ ನೀಡಲು  ಒಪ್ಪದಿದ್ದಾಗ ಗ್ರಾಚ್ಯುಯಿಟಿ ಹಾಗೂ ಭವಿಷ್ಯನಿಧಿಯ ಜೊತೆಗೆ ಇನ್ನಷ್ಟು ಮೊತ್ತವನ್ನು ಸೇರಿಸಿ ಕೊಡುವುದಾಗಿ ಕಾರ್ಖಾನೆಯವರು ಭರವಸೆ ನೀಡುತ್ತಿದ್ದಾರೆ. ಅದಕ್ಕೂ ಒಪ್ಪದಿದ್ದಾಗ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ. ಮೂರು ತಿಂಗಳಿನಿಂದ ಈ ಪ್ರಕ್ರಿಯೆ ಆರಂಭವಾಗಿದೆ’ ಎಂದು ಸೇಡಂನ ಕಾರ್ಮಿಕ ಮುಖಂಡ ಉಮೇಶ ಚವಾಣ್‌ ತಿಳಿಸಿದರು.

‘ಕಂಪನಿಗೆ ಆಗಲಿರುವ ನಷ್ಟ ಸರಿದೂಗಿಸಿಕೊಳ್ಳಲು ಸೇಡಂ ಹಾಗೂ ವಾಡಿಯಲ್ಲಿರುವ ಎರಡು ಸಿಮೆಂಟ್‌ ಕಾರ್ಖಾನೆಯವರು ನೌಕರರನ್ನು ಒತ್ತಾಯಪೂರ್ವಕವಾಗಿ ಮನೆಗೆ ಕಳುಹಿಸುತ್ತಿದ್ದಾರೆ’ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!