CSK ವಿರುದ್ಧ ಸೇಡು ತೀರಿಸಿಕೊಂಡ RCB ಪಡೆಗೆ 1 ರನ್ ಗೆಲುವು!
ಬೆಂಗಳೂರು(ಏ.21): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ CSK ನಡುವಿನ ಪಂದ್ಯ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರಾವಾಗಿದೆ. ಅಂತಿಮ ಎಸೆತದಲ್ಲಿ ಬೆಂಗಳೂರು 1 ರನ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಉದ್ಘಾಟನಾ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಗೆಲುವಿಗೆ 162 ರನ್ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಿರಾಳವಾಗಿತ್ತು. ಕಾರಣ RCB ಬೌಲಿಂಗ್ನಲ್ಲಿ ಸುಲಭವಾಗಿ ಗುರಿ ಮುಟ್ಟಬಹುದು ಅನ್ನೋ ಲೆಕ್ಕಾಚಾರದಲ್ಲಿತ್ತು. ಆದರೆ ಡೇಲ್ ಸ್ಟೇನ್ ಹಾಗೂ ಉಮೇಶ್ ಯಾದವ್ ಆರಂಭದಲ್ಲೇ ಶಾಕ್ ನೀಡಿದರು. ಶೇನ್ ವ್ಯಾಟ್ಸ್ನ್ 5 ಹಾಗೂ ಸುರೇಶ್ ರೈನಾ ಶೂನ್ಯಕ್ಕೆ ಔಟಾದರು.
ಫಾಫ್ ಡುಪ್ಲೆಸಿಸ್ ಹಾಗೂ ಕೇದಾರ್ ಜಾಧವ್ ಕೂಡ ಆಸರೆಯಾಗಲಿಲ್ಲ. ದಿಢೀರ್ 4 ವಿಕೆಟ್ ಕಳೆದುಕೊಂಡ CSK ತಂಡಕ್ಕೆ ಅಂಬಾಟಿ ರಾಯುಡು ಹಾಗೂ ಎಂ.ಎಸ್.ಧೋನಿ ಜೊತೆಯಾಟ ಚೇತರಿಕೆ ನೀಡಿತು. ರಾಯುಡು 29 ರನ್ ಸಿಡಿಸಿ ಔಟಾದರು. ಧೋನಿ ಬ್ಯಾಟಿಂಗ್ RCB ಲೆಕ್ಕಾಚಾರ ಉಲ್ಟಾ ಮಾಡಿತು.
ರವೀಂದ್ರ ಜಡೇಜಾ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಧೋನಿ CSK ತಂಡದ ಗೆಲುವಿನ ಆಸೆ ಚಿಗುರಿಸಿದರು. ಆದರೆ ಜಡೇಜಾ ಕೇವಲ 11 ರನ್ ಸಿಡಿಸಿ ಔಟಾದರೆ, ಅಂತಿಮ ಹಂತದಲ್ಲಿ ಡ್ವೇನ್ ಬ್ರಾವೋ ಕೂಡ ನೆರವಾಗಲಿಲ್ಲ. CSK ಗೆಲುವಿಗೆ ಅಂತಿಮ 6 ಎಸೆತದಲ್ಲಿ 26 ರನ್ ಅವಶ್ಯಕತೆ ಇತ್ತು.
ಮೊದಲ 3 ಎಸೆತದಲ್ಲಿ ಧೋನಿ ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. 4ನೇ ಎಸೆತದಲ್ಲಿ 2 ರನ್ ಸಿಡಿಸಿದ ಧೋನಿ 5 ಎಸೆದಲ್ಲಿ ಸಿಕ್ಸರ್ ಸಿಡಿಸಿದರು. ಈ ಮೂಲಕ ಅಂತಿಮ 1 ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಬ್ರಾವೋ ರನೌಟ್ಗೆ ಬಲಿಯಾದರು. ಈ ಮೂಲಕ RCB 1 ರನ್ ರೋಚಕ ಗೆಲುವು ಸಾಧಿಸಿತು. ಧೋನಿ 48 ಎಸೆತದಲ್ಲಿ ಅಜೇಯ 84 ರನ್ ಸಿಡಿಸಿದರು. ಈ ಮೂಲಕ Rcb ಸತತ 2ನೇ ಗೆಲುವು ಸಾಧಿಸಿದೆ. ಆದರೆ CSK ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.