ಕರಾವಳಿಯಲ್ಲಿ ರೇವಣ್ಣ ಟೆಂಪಲ್ ರನ್
ಮಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿರುವ ಸಚಿವ ರೇವಣ್ಣ ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ಎದುರೇ ಪತ್ರಕರ್ತರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಶಾಸಕರ ರಾಜೀನಾಮೆ ಪರ್ವದಿಂದ ಕೋಮಾದಲ್ಲಿರುವ ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಲು ರೇವಣ್ಣ ಆರು ದಿನಗಳಿಂದ ಟೆಂಪಲ್ ರನ್ ಕೈಗೊಂಡಿದ್ದು, ಇಂದು ಕರಾವಳಿ ಜಿಲ್ಲೆಯ ದೇವಾಲಯಗಳ ದರ್ಶನ ಮಾಡಿದರು.
ದೇವಿಯ ದರ್ಶನ ಪಡೆಯಲು ರೇವಣ್ಣ ಇಂದು ಕಟೀಲಿಗೆ ಬಂದಿದ್ದರು. ಈ ವಿಚಾರ ತಿಳಿದು ಪತ್ರಕರ್ತರು ಎಂದಿನಂತೆ ಸುದ್ದಿ ಮಾಡಲು ದೇವಾಲಯಕ್ಕೆ ತೆರಳಿದ್ದರು. ದೇವಾಲಯ ಮುಂಭಾಗ ತೀರ್ಥ ಪ್ರಸಾದ ಸ್ವೀಕರಿಸಲು ರೇವಣ್ಣ ಬಂದಾಗ ಅಲ್ಲಿದ್ದ ವಾಹಿನಿಗಳ ವಿಡಿಯೋಗ್ರಾಫರ್ ಗಳು ವಿಡಿಯೋ ಮಾಡುತ್ತಿದ್ದರು.
ಪತ್ರಕರ್ತರನ್ನು ನೋಡುತ್ತಿದ್ದಂತೆ ಕೋಪಗೊಂಡ ರೇವಣ್ಣ, ಕ್ಯಾಮೆರಾ ಆಫ್ ಮಾಡುವಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ ಪೊಲೀಸರಿಗೆ ವಿಡಿಯೋ ಡಿಲೀಟ್ ಮಾಡಿಸಿ ಎಂದು ಸೂಚಿಸಿದ್ದಾರೆ. ದೇವಿಯ ಎದುರೇ ಅವಾಚ್ಯವಾಗಿ ಬೈದಿರೋದು ದೇವಿಗೆ ಅವಮಾನ ಮಾಡಿದಂತೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇವಣ್ಣ ದೇವಿಯ ಬಳಿ ಕ್ಷಮಾಪಣೆ ಕೇಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಸತತವಾಗಿ ದೇವರ ದರ್ಶನ ಮಾಡುತ್ತಿರುವ ರೇವಣ್ಣ, ಇಂದು ಉಡುಪಿಯ ಕೊಲ್ಲೂರು ಮುಕಾಂಬಿಕೆಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಶನಿವಾರ ಮೃತ್ಯುಂಜಯ ಹೋಮ ಮಾಡಿಸಿದ್ದರು. ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡು ಬಂದಿದ್ದರು. ಗುರುವಾರವೂ ದೇವಸ್ಥಾನಕ್ಕೆ ಹೋಗಿದ್ದು, ಮಂಗಳವಾರ ಬರಿಗಾಲಲ್ಲಿ ಶೃಂಗೇರಿ ದೇವಾಲಯಕ್ಕೆ ಹೋಗಿದ್ದರು. ಹೀಗೇ ರೇವಣ್ಣ ಬರಿಗಾಲಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ