ಪಡಿತರ ಚೀಟಿ, ಆಧಾರ್ ಕಾರ್ಡ್, ಪೌರತ್ವದ ದಾಖಲೆಗಳಲ್ಲ: ಚಿಂತಕ ಶಿವಸುಂದರ್
ಉಡುಪಿ: ಎನ್‌ಆರ್‌ಸಿಯಿಂದ ಹೊರಬೀಳುವ ಹಿಂದೂಗಳಿಗೂ ಸಿಎಎ ಕಾಯ್ದೆಯಡಿ ನಾಗರಿಕತ್ವ ಸಿಗುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಮುಸ್ಲಿಮರ ಎದೆಗೆ ಚೂರಿ ಹಾಕಿದರೆ, ಹಿಂದೂಗಳಿಗೆ ಬೆನ್ನಿಗೆ ಚೂರಿ ಹಾಕಲಿವೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ತಿಳಿಸಿದರು.
ಅಜ್ಜರಕಾಡು ಪುರಭವನದಲ್ಲಿ ಗುರುವಾರ ಉಡುಪಿ ಜಿಲ್ಲಾ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಮ್ಮಿಕೊಂಡಿದ್ದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಿಎಎ ಕಾಯ್ದೆಯು ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜತೆ ಸೇರಿಕೊಂಡರೆ ಸಂವಿಧಾನದ ಬುನಾದಿಯೇ ಬುಡಮೇಲು ಆಗುತ್ತದೆ. ಈ ಕಾಯ್ದೆಯಡಿ ಸರ್ಕಾರಕ್ಕೆ ತೃಪ್ತಿದಾಯಕ ದಾಖಲೆಗಳನ್ನು ತೋರಿಸದ ಹಿಂದೂ ಹಾಗೂ ಮುಸ್ಲಿಮರು ಡಿಟೆನ್ಷನ್ ಕ್ಯಾಂಪ್‌ಗಳಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಸ್ಸಾಂನಲ್ಲಿ ಎನ್‌ಆರ್‌ಸಿಗೆ ಕೇಳಿರುವ ದಾಖಲೆಗಳ ಪ್ರಕಾರ, ಪ್ರತಿಯೊಬ್ಬರೂ ಜನನ ಪ್ರಮಾಣ ಪತ್ರ, ಭೂಮಾಲೀಕತ್ವ ದಾಖಲೆ, ನ್ಯಾಯಾಲಯದಲ್ಲಿ ವ್ಯಾಜಗಳಿದ್ದರೆ ಅದರ ದಾಖಲೆ ಸಲ್ಲಿಸಿ ಪೌರತ್ವ ಸಾಬೀತು ಪಡಿಸಬೇಕು. ಪಡಿತರ ಚೀಟಿ, ಆಧಾರ್ ಕಾರ್ಡ್, ಗುರುತಿನ ಚೀಟಿಗಳು ಪೌರತ್ವದ ದಾಖಲೆಗಳಲ್ಲ ಎಂದರು.
ದೇಶದಲ್ಲಿ ಕೋಟ್ಯಂತರ ಆದಿವಾಸಿಗಳ ಬಳಿ ಯಾವ ದಾಖಲೆಗಳಿಲ್ಲ, ಜನನ ಪ್ರಮಾಣ ಪತ್ರಗಳಿಲ್ಲ. ನೂರಾರು ವರ್ಷಗಳಿಂದ ಬದುಕುತ್ತಿರುವ ಇವರೆಲ್ಲರೂ ಎಲ್ಲಿಗೆ ಹೋಗಬೇಕು ಎಂದು ಶಿವಸುಂದರ್ ಪ್ರಶ್ನಿಸಿದರು.
ಎನ್‌ಪಿಆರ್ ತಾಯಿಯಾದರೆ, ಎನ್‌ಆರ್‌ಸಿ ಅದರ ಮಗುವಿದ್ದಂತೆ. ಎನ್‌ಪಿಆರ್ ಬಿಟ್ಟು ಎನ್‌ಆರ್‌ಸಿ ಜಾರಿ ಸಾಧ್ಯವೇ ಇಲ್ಲ. ಆದರೆ ಬಿಜೆಪಿ, ಎನ್‌ಪಿಆರ್ ಮಾತ್ರ ಮಾಡುತ್ತೇವೆ, ಎನ್‌ಆರ್‌ಸಿ ಮಾಡುವುದಿಲ್ಲ ಎಂದು ಸುಳ್ಳು ಹೇಳುತ್ತಲೇ ಎನ್‌ಪಿಆರ್‌ಗೆ ? ೪,೯೩೫ ಕೋಟಿ ಮೀಸಲಿಟ್ಟಿದೆ ಎಂದು ಟೀಕಿಸಿದರು.
ಈಗ ನಮ್ಮೆಲ್ಲರ ಹೋರಾಟ ಎನ್‌ಪಿಆರ್ ರದ್ದಾಗುವವರೆಗೂ ನಡೆಯಬೇಕು. ಸಂಸತ್ತಿನ ಒಳಗೆ, ಹೊರಗೆ ಪ್ರತಿಭಟನೆಗಳು ನಡೆಯಬೇಕು. ಆಂದೋಲನ ತೀವ್ರ ಸ್ವರೂಪ ಪಡೆದುಕೊಳ್ಳಬೇಕು. ಎನ್‌ಪಿಆರ್ ಹಿಂದೂಗಳಿಗೂ ಹೆಚ್ಚು ಅಪಾಯಕಾರಿಯಾಗಿದ್ದು, ಮುಸ್ಲಿಮೇತರರು ಎಚ್ಚೆತ್ತುಕೊಳ್ಳಬೇಕು. ಮನೆಮನೆಗೂ ಅಭಿಯಾನ ಮಾಡಿ, ಜನರಿಗೆ ಸತ್ಯ ತಿಳಿಸುವ ಕೆಲಸಗಳು ನಡೆಯಬೇಕು ಎಂದರು.
ಸಿಎಎ ಕಾಯ್ದೆ ಜಾರಿಗೆ ಬರುವ ಮುನ್ನವೇ ವಿದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದವರಿಗೆ ಹಿಂದೆ ಪೌರತ್ವ ನೀಡಲಾಗಿದೆ. ಹೀಗಿರುವಾಗ ಸಿಎಎ ಜಾರಿ ಉದ್ದೇಶವಾದರೂ ಏನು. ಪೌರತ್ವ ಕಾಯ್ದೆಗೆ ಹಲವು ಬಾರಿ ತಿದ್ದುಪಡಿಗಳಾಗಿದ್ದು, ೨೦೦೩, ೦೪ರಲ್ಲಿ ನಡೆದ ತಿದ್ದುಪಡಿಗಳು ಸಾಂವಿಧಾನಿಕ ಬುನಾದಿಯನ್ನು ಅಲುಗಾಡಿಸಿವೆ.
ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಮಾತನಾಡಿ, ಭಾರತ ಎಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭೂಪ್ರದೇಶವಲ್ಲ, ನದಿ, ಪರ್ವತ, ಸಮುದ್ರಗಳಲ್ಲ, ೧೨೦ ಕೋಟಿ ಜನರು ಸೇರಿ ಭಾರತ. ಜಾತಿ, ಧರ್ಮಗಳು ಒಟ್ಟಾಗಿ ಭಾರತವಾಗಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಮಾಡುವಲ್ಲಿ ಇರುವ ಉತ್ಸಾಹ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವುದರಲ್ಲಿ ಇಲ್ಲ. ಜಿಡಿಪಿ ಕುಸಿದು ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ನಿರುದ್ಯೋಗ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ವಿ.ಎಸ್.ಉಗ್ರಪ್ಪ, ವಿನಯ್‌ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಜಿಲ್ಲಾಧ್ಯಕ್ಷೆ ರೋಷಿನಿ ಒಲಿವೆರ, ಮುಖಂಡರಾದ ರಂಗಸ್ವಾಮಿ, ವಿಜಯ್‌ಸಿಂಗ್, ಎಐಸಿಸಿ ಕಾರ್ಯದರ್ಶಿ ಬಿ.ಎಲ್.ಸಂದೀಪ್ ಉಪಸ್ಥಿತರಿದ್ದರು.