ರಾಮಲಲ್ಲಾಗೆ ರಾಮಜನ್ಮ ಭೂಮಿ,ಮಸೀದಿಗೆ 5ಎಕರೆ ನೀಡಲೇಬೇಕು: ಮರುಪರಿಶೀಲನಾ ಅರ್ಜಿ ವಜಾ
ಅಯೋಧ್ಯಾ: ವಿವಾದಿತ ರಾಮಜನ್ಮ ಭೂಮಿ ರಾಮಲಲ್ಲಾಗೆ ನೀಡಿ, ಸುನ್ನಿ ವಕ್ಫ್ ಬೋರ್ಡ್ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 18 ಮರುಪರಿಶೀಲನ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ಪಂಚ ಪೀಠ ನೀಡಿದ್ದ ಅಯೋಧ್ಯೆ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಚಂದ್ರಚೂಡ್, ಅಶೋಕ್ ಭೂಷಣ್, ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಪಂಚ ಪೀಠ ಅರ್ಜಿಗಳನ್ನು ವಜಾಗೊಳಿಸಿದೆ.
ಅಯೋಧ್ಯೆ ತೀರ್ಪು ಪ್ರಶ್ನಿಸಿ ಅಖಿಲ ಭಾರತೀಯ ಹಿಂದೂ ಮಹಾಸಭಾ, ಮುಸ್ಲಿಂ ದಾವೆದಾರರು ಸೇರಿದಂತೆ ಒಟ್ಟು 18 ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಈ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದು ಅಯೋಧ್ಯೆ ವಿವಾದ ಇಲ್ಲಿಗೆ ಸಮಾಪ್ತಿಯಾಗಿದೆ.