ರಾಹುಲ್ ಗಾಂಧಿ ಪಲಾಯನ ಬಹುದೊಡ್ಡ ಸಮಸ್ಯೆ: ಖುರ್ಶಿದ್
ನವದೆಹಲಿ: ಕಾಂಗ್ರೆಸ್ನ ಬಹುದೊಡ್ಡ ಸಮಸ್ಯೆ ಪಕ್ಷದ ನಾಯಕ ರಾಹುಲ್ ಗಾಂಧಿ ಪಲಾಯನ ಮಾಡುತ್ತಿರುವುದು. ಅಲ್ಲದೆ, ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ಹಾಗೂ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಶಿದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಯಾಕೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದನ್ನು ಚರ್ಚಿಸಲು ಸಹ ಯಾರೂ ಒಟ್ಟಿಗೆ ಸೇರಿಲ್ಲ. ನಮ್ಮ ನಾಯಕರು ಪಲಾಯನ ಮಾಡಿರುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಈ ವರೆಗೆ ಪಕ್ಷದ ಅಧ್ಯಕ್ಷರನ್ನು ನೇಮಿಸಿಲ್ಲ, ಬಹುಶಃ ಅಕ್ಟೋಬರ್ನಲ್ಲಿ ನಡೆಯುತ್ತಿರುವ ಕೆಲವು ರಾಜ್ಯಗಳ ಚುನಾವಣೆ ನಂತರ ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುರ್ಶಿದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋನಿಯಾಗಾಂಧಿಯವರು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದರೂ ಸಹ ನಂತರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕುರಿತು ನಾವು ವಿಸ್ತೃತ ಚರ್ಚೆ ನಡೆಸಬೇಕಿತ್ತು. ಆದರೆ ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದರು ಎಂದು ಖುರ್ಶಿದ್ ಅಸಮಾಧಾನ ವ್ಯಕ್ತಪಡಿಸಿದರು.
ಸಂದರ್ಶನದಲ್ಲಿ ಕಾಂಗ್ರೆಸ್ ಸಮಸ್ಯೆಗಳ ಕುರಿತು ಮಾತನಾಡುವ ಮೂಲಕ ಖುರ್ಶಿದ್ ಅವರು ಅತ್ಯಂತ ಹಳೇಯ ಪಕ್ಷಕ್ಕೆ ಎದುರಾಗಿರುವ ಅಸ್ತಿತ್ವದ ಕುರಿತ ಬಿಕ್ಕಟ್ಟಿನ ಬಗ್ಗೆ ಇರುವ ಆತಂಕವನ್ನು ಇನ್ನೂ ದ್ವಿಗುಣಗೊಳಿಸಿದ್ದಾರೆ.
ನಮ್ಮ ಪಕ್ಷ ಇಂದು ಯಾವ ಮಟ್ಟದಲ್ಲಿದೆ ಎಂಬುದನ್ನು ನೆನೆದರೆ ತುಂಬಾ ನೋವಾಗುತ್ತದೆ, ಅಷ್ಟೇ ಕಾಳಜಿಯೂ ಇದೆ. ಏನೇ ಆಗಲಿ ನಾವು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಕೆಲವರು ಪಕ್ಷದಿಂದ ಎಲ್ಲವನ್ನೂ ಪಡೆದು ಇದೀಗ ಬೇರೆ ಪಕ್ಷಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪಕ್ಷಾಂತರವಾಗುತ್ತಿದ್ದಾರೆ ಎಂದು ಹರಿಹಾಯ್ದರು