ಅರಣ್ಯ ಇಲಾಖೆ ವಿರುದ್ಧ ಜನ ದಂಗೆ ಏಳುತ್ತಾರೆ:ರಘುಪತಿ ಭಟ್
ಉಡುಪಿ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸುತ್ತಿದ್ದಾರೆ. ಅರಣ್ಯ ಇಲಾಖೆಯ ವಿಚಾರವಾಗಿ ಮುಖ್ಯ ಚರ್ಚೆ ಇದ್ದರೂ ಜಿಲ್ಲಾ ಅರಣ್ಯ ಅಧಿಕಾರಿ ಕಮಲ ಅವರು ಸಭೆಗೆ ಗೈರಾಗಿದ್ದು , ಹಿಂದಿನ ಸಭೆಗಳಿಗೂ ಗೈರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೂ ಸ್ಪಂದಿಸುತ್ತಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ಸಂದರ್ಭ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಿಇಒ ಪ್ರೀತಿ ಗೆಹ್ಲೋಟ್, ಡಿಎಫ್‌ಒಗೆ ಮಂಗಳೂರು ಹೆಚ್ಚುವರಿ ಪ್ರಭಾರ ಹುದ್ದೆ ವಹಿಸಿರುವ ಕಾರಣ ಸಭೆಗೆ ಬಂದಿಲ್ಲ. ಬದಲಾಗಿ ಎಸಿಎಫ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಒಪ್ಪದ ಸದಸ್ಯರು ನಿರ್ಣಯ ತೆಗೆದುಕೊಳ್ಳಲು ಪಟ್ಟುಹಿಡಿದರು.
ಭಾಗಶಃ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವ ಕಲ್ಲು ಕ್ವಾರಿಗಳ ಪರವಾನಗಿ ನವೀಕರಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಪರಿಣಾಮ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ ಎಂದು ಶಾಸಕ ರಘುಪತಿ ಭಟ್ ಅಸಮಾಧಾನ ಹೊರಹಾಕಿದರು.
ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಅಸಡ್ಡೆಯಿಂದ ಜಿಲ್ಲೆಯಲ್ಲಿ ಕ್ರಷರ್‌ಗಳು ಮುಚ್ಚಿಹೋಗುವ ಪರಿಸ್ಥಿತಿ ಬಂದಿದೆ. ಕಟ್ಟಡ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ, ಗಣಿ ಇಲಾಖೆ ಸಚಿವರು, ಡಿಎಫ್‌ಒ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಕಂದಾಯ, ಗಣಿ, ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆಸಿ ಭಾಗಶಃ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವ ಹಳೆಯ ಕಲ್ಲು ಕ್ವಾರಿಗಳನ್ನು ಡೀಮ್ಡ್‌ಫಾರೆಸ್ಟ್‌ನಿಂದ ಕೈಬಿಡಲು ನಿರ್ಧರಿಸಲಾಗಿತ್ತು. ಬಳಿಕ ನಿಯಮಗಳ ನೆಪವೊಡ್ಡಿ ಜಂಟಿ ಸರ್ವೆಯ ವರದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಿ ಹಾಕುತ್ತಿಲ್ಲ ಎಂದು ಆರೋಪಿಸಿದರು.
3 ಕ್ವಾರಿಗೆ ಮಾತ್ರ ಅನುಮತಿ: ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಕೆ.ಕುಸುಮಾಧರ ಮಾತನಾಡಿ, ಜಿಲ್ಲೆಯಲ್ಲಿ 14 ಕ್ವಾರಿಗಳ ನವೀಕರಣಕ್ಕೆ ಹಿಂದೆ ಜಂಟಿ ಸರ್ವೆ ನಡೆಸಲಾಗಿತ್ತು. ಅದರಲ್ಲಿ 3 ಕ್ವಾರಿಗಳಿಗೆ ಅನುಮತಿ ನೀಡಲಾಗಿದ್ದು, 11 ಕ್ವಾರಿಗಳು ಭಾಗಶಃ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವ ಕಾರಣ ಅನುಮತಿ ಕೊಟ್ಟಿಲ್ಲ.
ಜಿಲ್ಲೆಯಲ್ಲಿರುವ ಡೀಮ್ಡ್ ಫಾರೆಸ್ಟ್ ವ್ಯಾಪ್ತಿ ಎಷ್ಟು, ಅಲ್ಲಿರುವ ಕ್ವಾರಿಗಳ ಪ್ರದೇಶ ಎಷ್ಟು ಎಂಬುದನ್ನು ಸರ್ವೆ ನಡೆಸಿ ವಿಂಗಡಿಸಿ ವರದಿ ನೀಡಬೇಕು. ಅಲ್ಲಿಯವರೆಗೂ ನವೀಕರಣಕ್ಕೆ ಅನುಮತಿ ನೀಡದಂತೆ ಡಿಎಫ್‌ಒ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಸಾವಿರಾರು ಎಕರೆ ಭಾಗಶಃ ಡೀಮ್ಡ್ ಫಾರೆಸ್ಟ್ ಇದ್ದು, ಇದರಲ್ಲಿ ಒಂದೆರಡು ಎಕರೆ ಜಾಗದಲ್ಲಿರುವ ಕ್ವಾರಿಗಳನ್ನು ವ್ಯಾಪ್ತಿಯಿಂದ ಕೈಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ. ಇದಕ್ಕೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ಜನ ದಂಗೆ ಏಳಲಿದ್ದಾರೆ: ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಹಳೆಯ ರಸ್ತೆಗಳನ್ನು ದುರಸ್ಥಿ ಮಾಡಲು ಬಿಡುತ್ತಿಲ್ಲ. ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಅರಣ್ಯ ಇಲಾಖೆ ವಿರುದ್ಧ ಜನ ದಂಗೆ ಏಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಮಾತನಾಡಿ, ‘ಸಿದ್ದಾಪುರ, ಆಜ್ರಿ, ಉಳ್ಳೂರು ಗ್ರಾಮಗಳನ್ನು ಅತಿ ಸೂಕ್ಷ್ಮವಲಯ ಪ್ರದೇಶಕ್ಕೆ ಸೇರ್ಪಡೆಗೊಳಿಸಲು ಸರ್ವೆ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಶೇ 80ರಷ್ಟು ಕೃಷಿಕರಿದ್ದು, ಸೂಕ್ಷ್ಮ ಪ್ರದೇಶವಾಗಿ ಘೋಷಣೆಯಾದರೆ ರೈತರಿಗೆ ತೊಂದರೆಯಾಗಲಿದೆ. ಮೂಲಸೌಕರ್ಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಗುರುತಿಸಲಾಗಿರುವ ಅಭಯಾರಣ್ಯದ ಅಂಚಿನಿಂದ 1 ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಕೊಲ್ಲೂರಿನಂತಹ ಕಡೆ ಶೂನ್ಯಕ್ಕೆ ಇಳಿಸಲಾಗಿದೆ. ಗುರುತಿಸದ ಅಭಯಾರಣ್ಯಗಳ ಅಂಚಿನಿಂದ 10 ಕಿ.ಮೀ ವರೆಗಿನ ವ್ಯಾಪ್ತಿಯನ್ನು ಬಫರ್ ಝೋನ್‌ಗೆ ತರಲು ಅವಕಾಶವಿದೆ ಎಂದು ಎಸಿಎಫ್ ಮಾಹಿತಿ ನೀಡಿದರು.
ಈಗಾಗಲೇ ಮೂಕಾಂಬಿಕಾ ಅಭಯಾರಣ್ಯದ ನಕ್ಷೆ ತಯಾರಿಸಿ ಸಲ್ಲಿಸಲಾಗಿದ್ದು, ಸೋಮೇಶ್ವರ ಹಾಗೂ ಕುದುರೆಮುಖ ಅಭಯಾರಣ್ಯ ನಕ್ಷೆ ಸಿದ್ಧವಾಗಬೇಕಿದೆ ಎಂದು ಮಾಹಿತಿ ನೀಡಿದರು.
ಇನ್ನೂ ಗುರುತಿಸದ ಅಭಯಾರಣ್ಯ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ ಪ್ರದೇಶಕ್ಕೆ ಇಳಿಸುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಮಿತ್ ಶೆಟ್ಟಿ, ಸುನಂದಾ ಪುತ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.