ರಾಘು – ‘ಫೋಕಸ್ ರಾಘು’ ಆದ ಕಥೆ

ಉಡುಪಿ – ಸುಡುವ ಬಡತನದ ಬಾಲ್ಯ, ಹಳ್ಳಿಯ ಜೀವನ, ಅದರಲ್ಲೂ ಕಂಗಳಲ್ಲಿ ತುಂಬಿರುವ ಮಹತ್ವಕಾಂಕ್ಷೆ, ಉಡುಪಿಯ ಕೊಡಂಗಳ ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದ ಪ್ರತಿಭೆ ಇಂದು ವಿಶ್ವವಿಖ್ಯಾತ ಛಾಯಾಚಿತ್ರಗಾರ, ಚಿತ್ರದ ಕೆಳಗೆ ಫೋಕಸ್ ರಾಘು ಅಂತ ಹಸ್ತಾಕ್ಷರ ಇದ್ದರೆ ಸಾಕು ಅದನ್ನ ನೋಡಲು ಜನ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ .

ರಾಘು ಅವರ ಯಶಸ್ವಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ, ಬಡತನದಿಂದ ಇನ್ನೇನು ಸ್ವಲ್ಪ ಮುಕ್ತಿ ಸಿಕ್ಕಿತ್ತು ಎನ್ನುವಾಗಲೇ ಜೀವನಕ್ಕೆ ಇನ್ನೊಂದು ಆಘಾತ ಸಿಡಿಲು ಬಡಿಯಿತು. ಅಪಘಾತದಲ್ಲಿ ರಾಘು ಅವರ ಬಲ ಕೈ ಮೂಳೆ ಮುರಿದು ಹೋಗಿತ್ತು. ಇನ್ನು ಕೆಲಸ ಸಾಧ್ಯವಿಲ್ಲ. ಕೈಯಲ್ಲಿ ನಯಾಪೈಸಾ ಇಲ್ಲ . ಸ್ನೇಹಿತರನ್ನು ಕಾಡಿ ಬೇಡಿ ಹಣ ಹೊಂದಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು .

ನಂತರ ಕೈ ನೋವು ಗುಣವಾಗುತ್ತಿದ್ದಂತೆ ಮತ್ತೆ ಕನಸು ಕಾಡಲು ಆರಂಭವಾಯಿತು. ನುರಿತ ಫೋಟೋಗ್ರಾಫರ್ ತರಬೇತುದಾರ ಗುರುದತ್ ಕಾಮತ್ ರವರ ಗರಡಿಯಲ್ಲಿ ಪಳಗಿ. ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಹೈಸ್ಕೂಲ್ ಮುಗಿದ ನಂತರ ಸ್ವಂತ ಪ್ರಯತ್ನ. ತಾನೇ ದುಡಿಯುತ್ತಾ, ಸ್ವಾವಲಂಬಿಯಾಗಿ, ಬಿ.ಕಾಂ ಪದವಿಯನ್ನು ಪಡೆದರು.

ಕಷ್ಟದ ದಿನಗಳಲ್ಲೂ ಪ್ರಕೃತಿ ಸೌಂದರ್ಯದ ಜೊತೆ ರಾಜಿ ಮಾಡಿಕೊಂಡ ರಾಘು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಓದು ಮುಗಿದು ಮೊದಲ ಉದ್ಯೋಗ ಫೋಟೋ ಲ್ಯಾಬ್ ಒಂದರಲ್ಲಿ ಸಹಾಯಕನಾಗಿ ಕೆಲಸ. ಆ ನಂತರ “ಐತಾಳ್ ಸ್ಟೂಡಿಯೋ” ದಲ್ಲಿ ವೀಡಿಯೋಗ್ರಾಫರ್ ವೃತ್ತಿ ತನ್ನ ಅಗಾಧ ಪ್ರತಿಭೆ ಹೊರತೆಗೆಯಲು ಫೋಟೋಗ್ರಫಿ ವೇದಿಕೆಯಾಯಿತು. ಉಡುಪಿಯಲ್ಲಿ ತನ್ನ ಸ್ವಂತ ಸ್ಟೂಡಿಯೋ ತೆರೆದರು , ಮದುವೆ , ಪ್ರಿ ವೆಡ್ಡಿಂಗ್ ಫೋಟೋಗ್ರಫಿ ಯಲ್ಲಿ ವಿನೂತನ ಪ್ರಯೋಗಗಳೊಂದಿಗೆ ತನ್ನದೇ ಆದ ಛಾಪು ಮೂಡಿಸಿದ ರಘು ತನ್ನ ಹವ್ಯಾಸಕ್ಕಾಗಿ ಅನೇಕ ಕಾಡು ಮೇಡುಗಳನ್ನು ಸುತ್ತಾಡಿ ತನ್ನ ಕ್ಯಾಮೆರಾ ಕಣ್ಣಲ್ಲಿ ಸೌಂದರ್ಯವನ್ನ ಸವಿದವರು ಇದೀಗ ದೇಶದ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನ ಪಸರಿಸುವ ಆಕಾಂಕ್ಷೆಯಿಂದ ವಿದೇಶಗಳನ್ನ ಸುತ್ತಾಡಿದವರು.

ಸುಮಾರು ಹದಿನೈದು ಅಂತರಾಷ್ಟ್ರೀಯ ಪ್ರಶಸ್ತಿ, ಇಪ್ಪತ್ತಕ್ಕೂ ಮಿಗಿಲಾಗಿ ರಾಷ್ಟ್ರ ಮಟ್ಟದ ಗೌರವಗಳು ರಾಘು‌ ಅವರ ಮುಡಿಗೇರಿವೆ. ರಾಷ್ಟ್ರ ಮಟ್ಟದ AFIP Distinction ಈಗಾಗಲೇ ಲಭಿಸಿದೆ. ಈ ಸೆಪ್ಟೆಂಬರ್ ತಿಂಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಮನ್ನಣೆಯೂ ಇವರಿಗೆ ಸಿಗಲಿದೆ. ರಾಘು ಅವರ ಈ ಸಾಧನೆಗಳನ್ನು ಗುರುತಿಸಿ 2017ರಲ್ಲಿ ನಿಕೋನ್ ಸಂಸ್ಥೆ ತನ್ನ ಪ್ರತಿಷ್ಟಿತ NPS ಸದಸ್ಯತ್ವವನ್ನು ನೀಡಿತ್ತು. ಈ ಬಾರಿ ಅದೇ ಸಂಸ್ಥೆಯು ಫೋಕಸ್ ರಾಘು ಅವರನ್ನು ಕರ್ನಾಟಕ ರಾಜ್ಯಕ್ಕೆ Nikon Influencer ಆಗಿ ನೇಮಕ ಮಾಡಿ ಹಳ್ಳಿ ಪ್ರತಿಭೆಯ ಪರಿಶ್ರಮಕ್ಕೆ ದೊಡ್ಡ ಗೌರವವನ್ನು ನೀಡಿದೆ.

ಈ ಎಲ್ಲ ಸಾಧನೆಗೆ ತನ್ನ ಬೆಂಗಾಲವಾಗಿ ತಾಯಿ ಅಕ್ಕ, ಪತ್ನಿ, ಮಕ್ಕಳು, ಸೇರಿದಂತೆ ರಾಘು ಕುಟುಂಬ ನಿಂತಿದೆ. ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಬುಧವಾರ ಫೋಕಸ್ ರಾಘು ಅವರ ಛಾಯಾಚಿತ್ರಗಳ ಪ್ರದರ್ಶನ ‘ಸ್ಪೆಕ್ಟ್ರಮ್’ ಫೋಕಸ್ ರಾಘು ಅವರ ತಾಯಿ ರತ್ನಾವತಿ ಫೋಟೊ ಪ್ರದರ್ಶನವನ್ನು ಉದ್ಘಾಟಿಸಿದರು, ಸುಮಾರು 5 ದಿನಗಳ ಕಾಲ ನಡೆಯುವ ಈ ಪ್ರದರ್ಶನಕ್ಕೆ ಮೊದಲನೇ ದಿನವೇ ಸುಮಾರು 1500 ಜನಕ್ಕೂ ಹೆಚ್ಚು ಜನ ಈ ಪ್ರದರ್ಶನವನ್ನ ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಪ್ರಸಿದ್ಧ ಛಾಯಾಚಿತ್ರಗಾರ ಗುರುದತ್ತ ಮಾತನಾಡಿ “ಫೊಟೊಗ್ರಫಿ ಕಾಪಿ ಪೇಸ್ಟ್‌ ಮಾಡುವ ಕಲೆಯಲ್ಲ; ಛಾಯಾಚಿತ್ರಕಾರನಿಗೆ ಸ್ವಂತಿಕೆ ಬಹಳ ಮುಖ್ಯ. ಹೃದಯಕ್ಕೆ ಹತ್ತಿರವಾಗುವಂತಹ ಚಿತ್ರಗಳನ್ನು ಸೆರೆಹಿಡಿದವ ಯಶಸ್ವಿಯಾಗುತ್ತಾನೆ “ಎಂದು ಕಿವಿಮಾತು ಹೇಳಿದರು.

ಛಾಯಾಗ್ರಾಹಕ ಭಾವಗಳನ್ನು ಗ್ರಹಿಸಿದರೆ ಮಾತ್ರ ಉತ್ತಮ ಚಿತ್ರಗಳು ಮೂಡಲು ಸಾಧ್ಯ. ಮುಖ್ಯವಾಗಿ ಛಾಯಾಚಿತ್ರಣವನ್ನು ಅತಿಯಾಗಿ ಪ್ರೀತಿಸುವಂತಿರಬೇಕು ಎಂದರು.ಮತ್ತೋರ್ವ ಅತಿಥಿ ಮನೋವೈದ್ಯ ಪಿ.ವಿ.ಭಂಡಾರಿ ಮಾತನಾಡಿ, ದುಬಾರಿ ಬೆಲೆಯ ಕ್ಯಾಮೆರಾಗಳಿಂದ ಮಾತ್ರ ಅತ್ಯುತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯಬಹುದು ಎಂಬ ಭಾವನೆ ಎಲ್ಲರಲ್ಲಿದೆ. ಸೂಕ್ಷ್ಮ ಒಳಗಣ್ಣಿನಿಂದ ಅದ್ಭುತ ಚಿತ್ರಗಳನ್ನು ತೆಗೆಯಲು ಸಾಧ್ಯ ಎಂದರು. ಛಾಯಾಗ್ರಾಹಕ ದೇಶವನ್ನು ಸುತ್ತಬೇಕು, ಅಪರೂಪದ ಕ್ಷಣಗಳನ್ನು ಸೆರೆಹಿಡಿಯಬೇಕು. ಕನಸು, ಶಿಸ್ತು, ಸಾಧಿಸುವ ಛಲ, ಶ್ರದ್ಧೆ ಹಾಗೂ ಅದೃಷ್ಟ ಇದ್ದರೆ ಛಾಯಾಗ್ರಹಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದರು

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ವಿಜಯ್ ಮಾತನಾಡಿ, ಸಮಯ ಯಾರಿಂದಲೂ ಹಿಡಿದಿಡಲು ಸಾಧ್ಯವಿಲ್ಲ. ಆದರೆ, ಭಾವನಾತ್ಮಕ ಸನ್ನಿವೇಶಗಳು, ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಫೊಟೊಗಳಲ್ಲಿ ಸೆರೆಹಿಡಿದಿಟ್ಟು, ಸುಧೀರ್ಘ ಕಾಲದವರೆಗೂ ಸಂತೋಷ ಅನುಭವಿಸಬಹುದು ಎಂದರು. ಗಾಂಧಿ ಆಸ್ಪತ್ರೆಯ ಎಂಡಿ ಡಾ.ಎಂ.ಹರಿಶ್ಚಂದ್ರ, ನಿಕಾನ್ ಸಂಸ್ಥೆಯ ಆರ್‌ಎಸ್‌ಎಂ ರಾಜಶೇಖರ್ ಇದ್ದರು.

ಒಟ್ಟು 5 ದಿನಗಳ ಕಾಲ ನಡೆಯುವ ಈ ಪ್ರದರ್ಶನ ಅನೇಕ ಕಣ್ಣುಗಳಿಗೆ ತಂಪನೀಡಿದೆ, ಇನ್ನಷ್ಟ್ಟು ಅದ್ಬುತ ದ್ರಶ್ಯಗಳು ಪೋಕಸ್ ರಾಘು ಕ್ಯಾಮೆರಾ ಕಣ್ಣಿಗೆ ಬೀಳಲಿ ಎಂಬ ಹಾರೈಕೆ ಉಡುಪಿ ಟೈಮ್ಸ್ ದು …..

Leave a Reply

Your email address will not be published. Required fields are marked *

error: Content is protected !!