ಪುತ್ತಿಗೆ ಮಠಕ್ಕೆ ಶಿಷ್ಯ ಸ್ವೀಕಾರ
ಉಡುಪಿ: ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಪುತ್ತಿಗೆ ಮಠಕ್ಕೆ 31ನೇ ಯತಿಗಳನ್ನಾಗಿ ಸುಶ್ರೀಂದ್ರ ತೀರ್ಥ ಶ್ರೀಗಳನ್ನು ನೇಮಕ ಮಾಡಲಾಯಿತು. ಹಿರಿಯಡಕದಲ್ಲಿರುವ ಪುತ್ತಿಗೆ ಮೂಲಮಠದಲ್ಲಿ ಸೋಮವಾರ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥರ ನೇತೃತ್ವದಲ್ಲಿ ಶಿಷ್ಯ ಸ್ವೀಕಾರ ವಿಧಿವಿಧಾನಗಳು ನಡೆಯಿತು.
ಬೆಳಿಗ್ಗೆ 11.45ರ ಶುಭ ಮುಹೂರ್ತದಲ್ಲಿ ವೇದ–ಮಂತ್ರ ಘೋಷಗಳ ನಡುವೆ ಪ್ರಶಾಂತ ಆಚಾರ್ಯ ಅವರಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಎಂದು ಮರು ನಾಮಕರಣ ಮಾಡುವ ಮೂಲಕ ಪಟ್ಟಾಭಿಷೇಕ ನೆರವೇರಿಸಲಾಯಿತು.
ಶಿಷ್ಯ ಸ್ವೀಕಾರಕ್ಕೂ ಮುನ್ನ ಧಾರ್ಮಿಕ ವಿಧಿವಿಧಾನಗಳು ನಡೆದವು. ಸೋಮವಾರ ಸ್ವರ್ಣಾ ನದಿಯ ತಟದಲ್ಲಿ ವಿರಾಜ ಹೋಮ, ಪ್ರಾಯಶ್ಚಿತ ಹೋಮಗಳನ್ನು ನಡೆಸಲಾಯಿತು. ಭಾನುವಾರ ಆತ್ಮಶ್ರಾದ್ಧ ಹಾಗೂ ಪೂರ್ವಾಶ್ರಮದವರಿಗೆ ಶ್ರಾದ್ಧ ಕ್ರಿಯೆಗಳು ಮಾಡಲಾಗಿತ್ತು.
ಸೋಮವಾರ ಬೆಳಿಗ್ಗೆ ನೂತನ ಶ್ರೀಗಳು ಸ್ವರ್ಣ ನದಿಯಲ್ಲಿ ಅವಘಾಹನ ಸ್ನಾನ ಮಾಡಿ ಹಳೆಯ ವಸ್ತ್ರಗಳನ್ನು ನದಿಯಲ್ಲಿ ಬಿಟ್ಟು ಹೊಸ ವಸ್ತ್ರಗಳನ್ನು ಧರಿಸಿದರು. ಬಳಿಕ ಹಿರಿಯ ಶ್ರೀಗಳಿಂದ ದಂಡ ಸ್ವೀಕರಿಸಿ, ಪಟ್ಟದ ದೇವರಾದ ವೀರ ವಿಠಲನಿಗೆ ಹಾಗೂ ಸ್ಥಂಭ ನರಸಿಂಹ ಸ್ವಾಮಿಗೆ ಪ್ರಾರ್ಥಿಸಿ, ಸನ್ಯಾಸ ಧೀಕ್ಷೆ ಪಡೆದುಕೊಂಡರು.
ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸುಗುಣೇಂದ್ರ ಸ್ವಾಮೀಜಿ ‘ಭಗವಂತನ ಸಂಕಲ್ಪದಂತೆ ಉತ್ತರಾಧಿಕಾರಿ ನೇಮಕ ನಡೆದಿದೆ. ವಟುವಿನ ಬಗ್ಗೆ 8 ತಿಂಗಳ ಸಂಶೋಧನೆ ಬಳಿಕ ಶಿಷ್ಯ ಸ್ವೀಕಾರ ಮಾಡಿಕೊಳ್ಳಲಾಗಿದೆ. ಮೊದಲ ಬಾರಿಗೆ 29 ವರ್ಷದ ವಟುವಿಗೆ ಸನ್ಯಾಸ ಧೀಕ್ಷೆ ನೀಡುವ ಸಾಹಸ ಮಾಡಿದ್ದೇನೆ. ಪುತ್ತಿಗೆ ಮಠ ಸಾಹಸಕ್ಕೆ ಹೆಸರಾದ ಮಠ’ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು.
ಜಗತ್ತಿನ 108 ರಾಷ್ಟ್ರಗಳಲ್ಲಿ ಶ್ರೀಕೃಷ್ಣನ ಭಕ್ತಿ ಪ್ರಸಾರ ಮಾಡುವ ಸಂಕಲ್ಪ ಮಾಡಲಾಗಿದೆ. ಜತೆಗೆ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಲ್ಲಿ ಪುತ್ತಿಗೆ ಮಠ ಮುಂಚೂಣಿಯಲ್ಲಿ ಇರಬೇಕು ಎಂಬ ದೃಷ್ಟಿಯಿಂದ ಶಿಷ್ಯ ಸ್ವೀಕಾರ ಮಾಡಿಕೊಳ್ಳಲಾಗಿದೆ ಎಂದರು.
ಯತಿಗಳ ಗೈರು: ಅಸಮಾಧಾನ
ಪುತ್ತಿಗೆ ಮಠಕ್ಕೆ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಅಷ್ಠಮಠಗಳ ಇತರ ಯತಿಗಳ ಗೈರು ಎದ್ದು ಕಾಣುತ್ತಿತ್ತು. ಮುಖ್ಯವಾಗಿ ಭಾಗವಹಿಸಬೇಕಿದ್ದ ದ್ವಂಧ್ವ ಮಠವಾದ ಕೃಷ್ಣಾಪುರ ಮಠದ ಶ್ರೀಗಳೂ ಭಾಗವಹಿಸಿರಲಿಲ್ಲ. ಆಮಂತ್ರಣ ಇಲ್ಲದ ಕಾರಣ ಪೇಜಾವರ ಶ್ರೀಗಳೂ ಗೈರಾಗಿದ್ದರು. ಏಕಾಏಕಿ ಶಿಷ್ಯ ಸ್ವೀಕಾರ ನಿರ್ಧಾರ ಪ್ರಕಟಿಸಿದ ಪುತ್ತಿಗೆ ಶ್ರೀಗಳ ವಿರುದ್ಧ ಅಸಮಾಧಾನ ಇರುವುದು ಎದ್ದು ಕಾಣುತ್ತಿತ್ತು.
ಸಾಫ್ಟ್ವೇರ್ ಎಂಜಿನಿಯರ್ ಸ್ವಾಮೀಜಿಯಾದರು…
ಸುಶ್ರೀಂದ್ರ ತೀರ್ಥರ ಪೂರ್ವಾಶ್ರಮದ ಹೆಸರು ಪ್ರಶಾಂತ್ ಆಚಾರ್ಯ. ತಂದೆ ಗುರುರಾಜ ಆಚಾರ್ಯ, ತಾಯಿ ವಿನುತಾ ಆಚಾರ್ಯ. ಬೆಂಗಳೂರಿನ ಎರಿಕ್ಸನ್ ಕಂಪೆನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಪ್ರಶಾಂತ್ ಆಚಾರ್ಯ ಅವರಿಗೆ ಬಾಲ್ಯದಿಂದಲೂ ಆಧ್ಯಾತ್ಮಿಕತೆಯತ್ತ ಒಲವು ಇತ್ತು. ಕೃಷ್ಣನ ಪೂಜೆ ಮಾಡುವ ಉತ್ಕಟ ಬಯಕೆಯನ್ನು 8 ತಿಂಗಳ ಹಿಂದೆ ಸುಗುಣೇಂದ್ರ ಶ್ರೀಗಳ ಬಳಿ ವ್ಯಕ್ತಪಡಿಸಿದ್ದರು. ಬಳಿಕ ವಟುವಿನ ಪೂರ್ವಾಪರ, ಜಾತಕವನ್ನು ಪರಿಶೀಲಿಸಿದ ಹಿರಿಯ ಯತಿಗಳು ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದರು.