ಮನೋರೋಗ ಗುಣಪಡಿಸಲು ಸಾಧ್ಯ: ಜಿಲ್ಲಾ ನ್ಯಾಯಧೀಶರು
ಉಡುಪಿ: ಮನೋರೋಗವು ಗುಣಪಡಿಸಬಹುದಾದ ಖಾಯಿಲೆಯಾಗಿದ್ದು, ಇದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಮಾನಸಿಕ ಆರೋಗ್ಯವನ್ನು ಸುಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿಎಂ ಜೋಷಿ ಹೇಳಿದ್ದಾರೆ.
ಅವರು ಗುರುವಾರ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಮನೋ ವಿಜ್ಞಾನ ವಿಭಾಗ, ಆಪ್ತ ಸಮಾಲೋಚನಾ ಸಮಿತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಇಲಾಖೆ, ಅಜ್ಜರಕಾಡು, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಐಎಂಎ ಭವನದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಖಾಯಿಲೆಯೂ ದೇಹದ ಇನ್ನಿತರ ಖಾಯಿಲೆಗಳಂತೆಯೇ ಪರಿಹರಿಸಬಹುದಾದ ಖಾಯಿಲೆ. ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಇದ್ದಲ್ಲಿ ಖಾಯಿಲೆ ಕಡಿಮೆಯಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಋಣಾತ್ಮಕ ವಿಚಾರಗಳಿಂದ ದೂರವಿದ್ದು, ಧನಾತ್ಮಕತೆಯನ್ನು ಅಳವಡಿಸಿಕೊಂಡು, ಸಮಚಿತ್ತವನ್ನು ಕಾಪಾಡಿಕೊಂಡಾಗ ಆತ್ಮಹತ್ಯೆಯಂತಹ ಆಲೋಚನೆಗಳು ಬರುವುದಿಲ್ಲ. ಹಾಗು ಮಾನಸಿಕ ಆರೋಗ್ಯ ಮತ್ತು ಆರೈಕೆ ಕಾಯ್ದೆಯ ಅನ್ವಯ ಯಾವುದೇ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎನ್ನುವ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ, ದೇವರು ಎಲ್ಲಾ ಸಮಸ್ಯೆಗಳನ್ನು ತನಗೇ ಕೊಟ್ಟಿದ್ದಾನೆ ಎನ್ನುವ ಋಣಾತ್ಮಕ ವಿಚಾರಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಕಷ್ಟಗಳನ್ನು ಎದುರಿಸುವ ಮನಸ್ಥಿತಿ ಹೊಂದಿ ವರ್ತಮಾನದಲ್ಲಿ ಜೀವಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಒತ್ತಡ ನಿವಾರಣೆಯಾಗಿ ಆತ್ಮಹತ್ಯೆಯಂತಹ ವಿಚಾರಗಳು ಮನಸ್ಸಿಗೆ ಬರುವುದಿಲ್ಲ. ಈ ಜೀವನ ಅಮೂಲ್ಯ ಅದರ ರಕ್ಷಣೆ ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ವ್ಯಕ್ತಿಯು ತನ್ನ ಸಾಮರ್ಥ್ಯ ಮೀರಿ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಒತ್ತಡಗಳು ಅವನನ್ನು ಆವರಿಸಿಕೊಳ್ಳುತ್ತದೆ. ನಮ್ಮನ್ನು ನಾವು ಅರಿತುಕೊಂಡಾಗ ಒತ್ತಡ ರಹಿತ ಜೀವನದಿಂದ ಸಾಧನೆಯನ್ನು ಮಾಡಲು ಪ್ರೇರಣೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾಸ್ಪತ್ರೆಯ ಮಾನಸಿಕ ತಜ್ಞ ಡಾ.ವಾಸುದೇವ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮಾನಸಿಕ ತಜ್ಞ ಡಾ.ಮಾನಸ್, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ವಾಣಿ ಆರ್ ಬಲ್ಲಾಳ್, ಸ್ನಾತಕೋತ್ತರ ಕಾಲೇಜಿನ ಮನೋವಿಜ್ಞಾನ ವಿಭಾಗದ ಡೀನ್ ಪ್ರೋ.ಸೋಝಾನ್ ಕೆ.ಜೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಸುರೇಂದ್ರ ಚಿಂಬಾಲ್ಕರ್ ಸ್ವಾಗತಿಸಿ, ವಿಜಯಾಬಾಯಿ ವಂದಿಸಿದರು.