ಭಾರತಕ್ಕೆ ಕ್ರೈಸ್ತ ಸಮುದಾಯದಿಂದ ಹೆಮ್ಮೆಯ ಕೊಡುಗೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಸಮಾಜಕ್ಕೆ ಮಾರ್ಗದರ್ಶನ ಹಾಗೂ ಸೇವಾ ತತ್ಪರತೆಗಾಗಿ ಕ್ರೈಸ್ತ ಸಮುದಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಶಂಸಿಸಿದ್ದಾರೆ. ಅಲ್ಲದೆ, ಕ್ರೈಸ್ತ ಸಮುದಾಯ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಹೆಮ್ಮೆಯಿಂದ ಸ್ಮರಿಸುತ್ತದೆ ಎಂದರು.
ಇಲ್ಲಿನ ತನ್ನ ನಿವಾಸದಲ್ಲಿ ಕ್ರಿಸ್ಮಸ್ ದಿನದಂದು ಕ್ರೈಸ್ತ ಸಮುದಾಯದ ಸದಸ್ಯರೊಂದಿಗೆ ನಡೆಸಿದ ಸಂವಹನ ದಲ್ಲಿ ಪ್ರಧಾನಿ ಅವರು ಕ್ರೈಸ್ತರೊಂದಿಗಿನ ತನ್ನ ಹಳೆಯ, ಆಪ್ತ ಬಾಂಧವ್ಯವನ್ನು ನೆನಪಿಸಿಕೊಂಡರು. ಅಲ್ಲದೆ, ಅವರು ಬಡವರು ಹಾಗೂ ವಂಚಿತರ ಸೇವೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇದ್ದಾರೆ ಎಂದರು.
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಮುದಾಯ ದಿಂದ ನಡೆಯುತ್ತಿರುವ ಸಂಸ್ಥೆಗಳು ದೇಶಾದ್ಯಂತ ನಿರಂತರ ಕೊಡುಗೆಯನ್ನು ನೀಡುತ್ತಿವೆ ಎಂದು ಅವರು ಹೇಳಿದರು.
ಏಸು ಕ್ರಿಸ್ತರ ಜೀವನ ಸಂದೇಶಲ್ಲಿ ಸಹಾನುಭೂತಿ ಹಾಗೂ ಸೇವೆ ಕೇಂದ್ರವಾಗಿದೆ. ಎಲ್ಲರಿಗೂ ನ್ಯಾಯ ಸಿಗುವ ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅವರು ಪ್ರಯತ್ನಿಸಿದರು ಎಂದು ಅವರು ತಿಳಿಸಿದರು.
ಈ ಮೌಲ್ಯಗಳು ಸರಕಾರದ ಅಭಿವೃದ್ಧಿ ಪ್ರಯಾಣದಲ್ಲಿ ಮಾರ್ಗಸೂಚಿ ಬೆಳಕಿನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು. ಹಿಂದೂ ತತ್ತ್ವಶಾಸ್ತ್ರದ ಮೂಲವೆಂದು ಪರಿಗಣಿಸಲಾದ ಉಪನಿಷತ್ತುಗಳು ಕೂಡ ಬೈಬಲ್ ನಂತೆ ಸಂಪೂರ್ಣ ಸತ್ಯವನ್ನು ಅರಿತುಕೊಳ್ಳುವಲ್ಲಿ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು.
ಜನರು ಮುಂದವರಿಯಲು ತಮ್ಮ ಪರಸ್ಪರ ಹಂಚಿಕೊಂಡು ಮೌಲ್ಯಗಳು ಹಾಗೂ ಪರಂಪರೆಯ ಕುರಿತು ಗಮನ ಕೇಂದ್ರೀಕರಿಸಬಹುದು. ಸಹಕಾರ ಹಾಗೂ ಸಮನ್ವಯ ಮನೋಭಾವ ‘ಸಬ್ಕಾ ಪ್ರಯಾಸ್’ನೊಂದಿಗೆ ಸೇರಿಕೊಂಡು ದೇಶವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಪ್ರಧಾನಿ ಅವರು ಹೇಳಿದರು.