ನಾಳೆ ಶಿರ್ವದಲ್ಲಿ ಮತ್ತೆ ಪ್ರತಿಭಟನೆ

ಶಿರ್ವ : ಫಾ. ಮಹೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಬಹಳಷ್ಟು ಸಂಶಯವಿದೆ ಹಾಗೂ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನೀಡಬೇಕೆಂದು ಆಗ್ರಹಿಸಿ, ನಾಳೆ ಬೆಳಿಗ್ಗೆ 10 ಗ೦ಟೆಗೆ ಶಿರ್ವದಲ್ಲಿ ಫಾ. ಮಹೇಶ್ ರವರ ಅಭಿಮಾನಿಗಳು ಶಿರ್ವದ ಸಾವೊದ್ ಅಮ್ಮನವರ ದೇವಾಲಯದ ವಠಾರದಿಂದ ಪಾದಯಾತ್ರೆಯ ಮೂಲಕ ಶಾಂತಿಯುತ ಮೆರವಣಿಗೆ ನಡೆಸಿ ಶಿರ್ವ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿ, ದೂರು ದಾಖಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


ಶನಿವಾರ ಮತ್ತು ಅದಿತ್ಯವಾರ ದೊಡ್ಡ ಸಂಖ್ಯೆಯಲ್ಲಿ ಶಿರ್ವ ದೇವಾಲಯದ ವಠಾರದಲ್ಲಿ ಫಾ. ಮಹೇಶ್ ಅವರ ನೂರಾರು ಅಭಿಮಾನಿಗಳು ಅವರ ಸಾವಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಯಲ್ಲಿ ಉಡುಪಿ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ ಜೆರಾಲ್ಡ್ ಐಸಾಕ್ ಲೋಬೋ ಸಹಿತ ಶಾಸಕ ಲಾಲಾಜಿ ಆರ್ ಮೆಂಡನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್  ಪ್ರತಿಭಟನಾಕಾರರ ಮನವೊಲಿಸಲು    ಪ್ರಯತ್ನ ಪಟ್ಟರೂ ಕೂಡಾ ಪ್ರತಿಭಟನಾಕಾರರು ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಮತ್ತು  ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲವೆಂದು ಆಗ್ರಹಿಸಿದ್ದರು.


ಈ ನಡುವೆ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಫಾ. ಮಹೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಸಂಬಂಧಿಕರು ಯಾವುದೇ ಸಂಶಯ ಇಲ್ಲವೆಂದು ಹೇಳಿದ್ದು ಮತ್ತು ಕೇಸನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಮಾತ್ರವಲ್ಲದೆ ನಿಮ್ಮಲ್ಲಿ ಯಾರಿಗಾದರೂ ಫಾ. ಮಹೇಶ್ ಸಾವಿನಲ್ಲಿ ಸಂಶಯವಿದ್ದರೆ ತಾವು ಸ್ವತಃ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಬಹುದು ಎಂದು ಹೇಳಿದರು.


ಬಳಿಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಸಫಲರಾಗಿದ್ದು, ಸ್ವತಃ ನಿಮ್ಮ ಜೊತೆ ನಾನು ಬರುತ್ತೇನೆ. ಜೊತೆಯಾಗಿ ಹೋಗಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸೋಣ ಎಂದು ತಿಳಿಸಿದ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!