ಪ್ರಿಯಾಂಕ ಗಾಂಧಿ ಬಂಧನ : ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಉತ್ತರ ಪ್ರದೇಶದ ಸೋನಭದ್ರ ಗ್ರಾಮದಲ್ಲಿ ನಡೆದ ಗೋಲಿಬಾರಿನಲ್ಲಿ ಮೃತರಾದ ಮನೆಯವರಿಗೆ ಸಾಂತ್ವನ ಹೇಳಲು ಹೋದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯನ್ನು ಬಂಧಿಸಿದ ಉತ್ತರ ಪ್ರದೇಶ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಜಿಲ್ಲಾ ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಯಿತು.
ಸೋನಭದ್ರ ಗ್ರಾಮದ ಮುಖ್ಯಸ್ಥನೊರ್ವ ತುಂಡು ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದನ್ನು ವಿರೋಧಿಸಿದ ಗ್ರಾಮಸ್ಥರ ಮೇಲೆ ಗೋಲಿಬಾರ್ ನಡೆಸಿ ಹತ್ತು ಜನರ ಹತ್ಯೆಗೈದ ಕುಟುಂಬದ ಮನೆಯವರಿಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಪ್ರಿಯಾಂಕ ಗಾಂಧಿಯನ್ನು ಬಂಧಿಸಿದ ಅಲ್ಲಿನ ಸರಕಾರದ ವಿರುದ್ದ ದೇಶ ವ್ಯಾಪಿ ಪ್ರತಿಭಟನೆ ನಡೆಯುತ್ತಿದೆ.
ನಾವು ಅಧಿಕಾರದಲ್ಲಿ ಇರಲಿ ,ಇಲ್ಲದಿರಲಿ ಕಾಂಗ್ರೆಸ್ ಪಕ್ಷ ಬಡವರ, ದೀನದಲಿತರ, ಶೋಷಿತ, ಆದಿವಾಸಿಗಳ ಪರ ನಿಲ್ಲುತ್ತದೆ. ತನ್ನ ಮಗನ ವಯಸ್ಸಿನ ಮಕ್ಕಳು ಈ ಗೋಲಿಬಾರಿನಿಂದ ಹತ್ಯೆಯಾಗಿದ್ದು ಇದರಿಂದ ಅವರ ಕುಟುಂಬದವರಿಗೆ ಸಮಾಧನಪಡಿಸಿ ಸಾಂತ್ವನ ಹೇಳಲು ಹೋದ ಪ್ರಿಯಾಂಕ ಗಾಂಧಿಯನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಖಂಡಿಸಿದರು.
ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ ಕುಮಾರ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಉತ್ತರ ಪ್ರದೇಶದಲ್ಲಿ ದಲಿತ ಕುದುರೆ ಏರಿದರೆ, ಕಾರಿನಲ್ಲಿ ಪ್ರಯಾಣಿಸಿದರೆ ಹತ್ಯೆ, ಕೊಲೆ ಮಾಡುವ ಹಂತಕ್ಕೆ ತಲುಪಿದೆಂದರೆ ಇದು ಗೂಂಡಾ ರಾಜ್ಯವಾಗಿರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ ಎಂದು ಪ್ರಶ್ನಿಸಿದ ಇವರು , ನೂರಾರು ವರ್ಷಗಳ ಹಿಂದೆ ಜನಪರ ಚಳವಳಿಯಾಗಿ ಹುಟ್ಟಿದ ಕಾಂಗ್ರೆಸ್ ಜನರ ನೋವುಗಳಿಗೆ ಸ್ಪಂದಿಸಿ ರಾಷ್ಟ್ರೀಯಾ ಪಕ್ಷವಾಗಿ ಬೆಳೆಯಿತು. ಈಗ ಧಾರ್ಮಿಕ ದ್ರುವೀಕರಣ ಮಾಡುವ ಮೂಲಕ ಬಿಜೆಪಿ ಪ್ರತಿಯೊಂದು ಚುನಾವಣೆಯಲ್ಲಿ ಅಧಿಕಾರ ಪಡೆಯಲು ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದರು.
ಮಹಿಳೆಯರನ್ನು ಮಾತೆ , ದೇವರುಹೇಳುವ ಬಿಜೆಪಿ ಮಹಿಳೆಯರನು ಸಮಾಜದಲ್ಲಿ ಮೇಲೆಕ್ಕೆ ಬರಲು ಬಿಡವುದಿಲ್ಲ. ನಾವು ಮತ್ತೆ ಗಾಂಧೀ ವಾದದಿಂದ ಚಳವಳಿ ಆರಂಭಿಸಿ ದೇಶದಲ್ಲಿ ನಡೆಯುವ ಅನ್ಯಾಯ ಅನಾಚಾರಗಳನ್ನು ತಡೆಯಬೇಕು, ಪ್ರತಿಬಾರಿ ಜಾತಿ, ಧರ್ಮ, ದೇವರು ಹೇಳಿ ಮಾಡುವ ಬೂಟಾಟಿಕೆಯ ಮುಖವಾಡ ಕಳಚಬೇಕೆಂದು ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ ಜ್ಯೋತಿ ಹೆಬ್ಬಾರ್ ಆಕ್ರೋಶ ವ್ಯಕ್ತಪಡಿಸಿದರು. ಆದಿವಾಸಿಗಳ ಕುಟುಂಬಗಳಿಗೆ ಸಂತೈಸಲು ಹೋದ ಪ್ರಿಯಾಂಕಾ ಗಾಂಧಿಯನ್ನು ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸಬೇಕಾಗಿ ಯು.ಪಿ. ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನರಸಿಂಹ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ ಅಮೀನ್ ,ಯುವಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ಕಿರಣ್ ಕುಮಾರ್ ,ಸರಸು ಬಂಗೇರ, ಜನಾರ್ಧನ್ ಭಂಡಾರ್‌ಕಾರ್, ಲೂವಿಸ್ ಲೋಬೊ, ಪ್ರಮೀಳಾ ಜತ್ತನ್ನ, ಭಾಸ್ಕರ ರಾವ್ ,ಚಂದ್ರಿಕಾ ಶೆಟ್ಟಿ, ಕೇಶವ ಕೊಟ್ಯಾನ್, ಕುಶಲ್ ಶೆಟ್ಟಿ, ಶಶಿಧರ್ ಶೆಟ್ಟಿ, ಅಬೀದ್ ಆಲಿ, ಯತೀಶ ಕರ್ಕೆರ ಮೊದಲಾದವರು ಉಪಸ್ಥಿತರಿದ್ದರು.