ಜು. 10 ರಿಂದ ಮಡಿಕೇರಿಯಲ್ಲಿ ಖಾಸಗಿ ಬಸ್‌ಗಳ ಏಕಮುಖ ಸಂಚಾರ ಆರಂಭ
ಮಡಿಕೇರಿ: ಜುಲೈ 10 ರಿಂದ ನೂತನ ಖಾಸಗಿ ಬಸ್ ನಿಲ್ದಾಣದಿಂದ ಖಾಸಗಿ ಬಸ್‌ಗಳು ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಖಾಸಗಿ ಬಸ್ ಮಾಲೀಕರ ಸಂಘದ ಮುಖ್ಯಸ್ಥರ ಉಪಸ್ಥಿಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಾಯೋಗಿಕವಾಗಿ ಒಂದು ತಿಂಗಳ ಮಟ್ಟಿಗೆ ಖಾಸಗಿ ಬಸ್‌ಗಳು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ರಾಸೀಟು ಮಾರ್ಗ, ಭಾರತೀಯ ಜೀವ ವಿಮಾ ನಿಗಮ ಕಚೇರಿ ಮಾರ್ಗದ ಮೂಲಕ ನೂತನ ಖಾಸಗಿ ಬಸ್ ನಿಲ್ದಾಣ ತಲಪುವುದು. ಹಾಗೆಯೇ ನೂತನ ಖಾಸಗಿ ಬಸ್ ನಿಲ್ದಾಣದಿಂದ ಪ್ರೆಸ್‌ಕ್ಲಬ್, ಕೈಗಾರಿಕಾ ಬಡಾವಣೆ ಮಾರ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತ ಮಾರ್ಗ ಖಾಸಗಿ ಬಸ್ ಓಡಾಟಕ್ಕೆ ನಿರ್ಧರಿಸಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೊಸ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದ್ದು, ಖಾಸಗಿ ಬಸ್‌ಗಳು ನೂತನ ಖಾಸಗಿ ಬಸ್ ನಿಲ್ದಾಣದಿಂದ ಸಂಚರಿಸಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕಿದೆ ಎಂದು ಅವರು ಕೋರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಡಿವೈಎಸ್‌ಪಿ ಸುಂದರ ರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಂಜುನಾಥ್ ಎಸ್ ಶಿರಾಳಿ, ಪೌರಾಯುಕ್ತರಾದ ರಮೇಶ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಅನೂಪ್ ಮಾದಪ್ಪ, ಷಣ್ಮುಗ, ಪ್ರಾದೇಶಿಕ ಸಾರಿಗೆ ಇಲಾಖೆಯ ವ್ಯವಸ್ಥಾಪಕರಾದ ಶಿವಣ್ಣ, ರೀಟಾ ಅವರು ಹಲವು ಸಲಹೆಗಳನ್ನು ನೀಡಿದರು.