ಕಲ್ಯಾಣ ಜನಾಂದೋಲನದ ಪೂರ್ವಾಭಾವಿ ಸಭೆ : ಅಧ್ಯಕ್ಷ ಟಿ.ಪಿ.ರಮೇಶ್ ಆಯ್ಕೆ

ಮಡಿಕೇರಿ ಜೂ. 30 : ಜಾತ್ಯತೀತ, ಉತ್ತಮ, ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕಾಗಿ ರೂಪುಗೊಂಡಿರುವ ಮತ್ತೇ ಕಲ್ಯಾಣ ಜನಾಂದೋಲನ ಕಾರ್ಯಕ್ರಮದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಂಚಾಲಕರಾಗಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಹಾಗೂ ಸಂಯೋಜಕರಾಗಿ ಮೋನಪ್ಪ ಆಯ್ಕೆಯಾಗಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಾಬಾವಿ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು.


ಬಸವಣ್ಣನವರ ತತ್ವ, ಆದರ್ಶ, ಚಿಂತನೆಯನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ, ಹೊಸ ದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶ್ರೀ ಮಠ ಮತ್ತೇ ಕಲ್ಯಾಣ ಎಂಬ ಜನಾಂದೋಲನ ರಾಜ್ಯಾದ್ಯಂತ ರೂಪಿಸಿದೆ. ಅಗಸ್ಟ್ ೫ ರಂದು ಮಡಿಕೇರಿ ನಗರದಲ್ಲಿ ಕಾರ್ಯಕ್ರಮ ನಡೆಯಲಿದ್ದು. ಕಾರ್ಯಕ್ರಮ ಯಾವ ರೀತಿ ಮೂಡಿಬರಬೇಕೆಂಬ ಬಗ್ಗೆ ಚರ್ಚಿಸಲಾಯಿತು.


ಟಿ.ಪಿ.ರಮೇಶ್ ಮಾತನಾಡಿ, ಕಾರ್ಯಕ್ರಮಕ್ಕೆ ಪೂರಕವಾಗಿ ಸಮಿತಿ ರಚಿಸಿ ಆ ಮೂಲಕ ಜವಾಬ್ದಾರಿ ನೀಡಿ. ನಂತರ ಆರ್ಥಿಕ ಕ್ರೋಡಿಕರಣ ಮಾಡಬೇಕಿದೆ. ಜಿಲ್ಲೆಯ ಸಮಾಜಮುಖಿ ಸಂಘಟನೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆದರೆ ಯಶಸ್ಸು ಸಾಧ್ಯ ಎಂದು ಸಲಹೆ ನೀಡಿದರು.


ಮಠದ ಪರವಾಗಿ ಆಗಮಿಸಿದ ಆಂದೋಲನದ ಪ್ರಮುಖ ಮಹೇಶ್ ಚಟ್ನಳ್ಳಿ ಮಾತನಾಡಿ, ಇದು ಕೇವಲ ಕಾರ್ಯಕ್ರಮವಲ್ಲ. ಸಮಾಜ ಮುಖಿ ಕಾರ್ಯ. ಬಸವಣ್ಣನವರ ಚಿಂತನೆಯನ್ನು ಸಕಾರಗೊಳಿಸಿ. ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಜಾತಿ, ಧರ್ಮ ಎನ್ನದೇ ಎಲ್ಲಾರು ಒಂದಾಗಿ. ಈ ಕಾರ್ಯಕ್ರಮ ಮಾಡಬೇಕು. ಉದ್ದೇಶವನ್ನು ಈಡೇರಿಸಿಬೇಕು. ಕಾರ್ಯಕ್ರಮಕ್ಕೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಯುವಜನತೆಯೊಂದಿಗೆ ಸಂವಾದ ನಡೆಸಲಾಗುವುದು. ಆ ಮೂಲಕ ಸಮಾಜದ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಕಾರ್ಯಕ್ರಮದಂದು ನಗರದ ಮುಖ್ಯ ಬೀದಿಗಳಲ್ಲಿ ಸಾಮರಸ್ಯ ನಡಿಗೆ ಮೂಲಕ ಸಂದೇಶ ಸಾರಲಾಗುವುದು. ಜಿಲ್ಲಾ ಮಟ್ಟದ ಸಮಿತಿ ಪೂರಕ ಬೆಂಬಲ ನೀಡಬೇಕೆಂದರು.


ಕಿರಿಕೊಡ್ಲಿ ಮಠದ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದಲ್ಲಿ ಮೂಡಿದ ಚಿಂತನೆಯನ್ನು ೨೧ನೇ ಶತಮಾನದಲ್ಲಿ ಸಕಾರಗೊಳಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಠ ಕೂಡ ಸಹಕಾರ ನೀಡುತ್ತೆ ಎಂದರು. ಸಾಮಾಜಿಕ ಹೋರಾಟಗಾರ ಅಮಿನ್ ಮೊಹ್ಸಿನ್ ಸಭಿಕರನ್ನು ಉದ್ದೇಶಿಸಿ ಸಮಾಜದಲ್ಲಿ ಇನ್ನೂ ಕೂಡ ಜಾತಿ ವ್ಯವಸ್ಥೆ ಇದೆ. ಇದನ್ನು ಹೋಗಲಾಡಿಸಿ ಸುಸ್ಥಿರ ಸಮಾಜಕ್ಕೆ ಈ ರೀತಿಯ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.


ಶರಣ್ಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡುತ್ತಾ ಸರ್ವಧರ್ಮಿಯರು, ವಿವಿಧ ಸಂಘಟನೆಗಳನ್ನು ಒಂದುಗೂಡಿಸಿ ಮಾತ್ತೊಂದು ಸಭೆ ನಡೆಸಿ. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮತ್ತೊಂದು ಸುತ್ತಿನ ಮಾತುಕಥೆ ನಡೆಸಿ. ಕಾರ್ಯಕ್ರಮದ ಸದುದ್ದೇಶ ಈಡೇರಿಸುತ್ತೇವೆ ಎಂದರು.


ಜುಲೈ ೬ ರಂದು ಅಂಬೇಡ್ಕರ್ ಭವನದಲ್ಲಿ ವಿವಿಧ ಸಂಘಟನೆಗಳ ಸಭೆಯನ್ನು ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಶಿರಿಗಡಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮಿ, ದಲಿತ ಸಂಘರ್ಷ ಸಮಿತಿಯ ಮುಖಂಡ ವೀರಭದ್ರಯ್ಯ, ಕಾರ್ಯಕ್ರಮದ ಪ್ರಮುಖ ಮೊಣ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!