ನಾಳೆ “ಪ್ರಕಾಶಾಭಿನಂದನ” ಸಮಾರಂಭ: ಸುರೇಶ್ ಶೆಟ್ಟಿ ಗುರ್ಮೆ
ಮಂಗಳೂರು: ಉದ್ಯಮಿ ಕೆ. ಪ್ರಕಾಶ ಶೆಟ್ಟಿ ಅವರ 60 ನೇ ಜನ್ಮದಿನದ ಅಂಗವಾಗಿ ಬುಧವಾರ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಆಯೋಜಿಸಿರುವ ‘ಪ್ರಕಾಶಾಭಿನಂದನ’ ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಪ್ರಕಾಶಾಭಿನಂದನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನಂದನಾ ಕಾರ್ಯಕ್ರಮದ ಸಿದ್ಧತೆಗಾಗಿ ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ 100ಕ್ಕೂ ಅಧಿಕ ಸಭೆಗಳನ್ನು ನಡೆಸಲಾಗಿದೆ. ದೇಶದ ಹಲವೆಡೆ ಹಾಗೂ ಜಗತ್ತಿನ ವಿವಿಧೆಡೆಯಿಂದ ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಬುಧವಾರ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಸುಮಲತಾ ಅಂಬರೀಷ್, ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳ 15 ಜನ ಸಾಧಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಡಾ.ಮೋಹನ ಆಳ್ವ ನೇತೃತ್ವದಲ್ಲಿ 100ಕ್ಕೂ ಅಧಿಕ ಮಂದಿ ಅಂಗವಿಕಲರು, ಬಡ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಈಗಾಗಲೇ ತಲಾ ₹1 ಲಕ್ಷದಂತೆ ಸಹಾಯಧನ ವಿತರಿಸಲಾಗಿದೆ. 60 ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ. ಒಟ್ಟಾರೆ ₹1 ಕೋಟಿಗೂ ಹೆಚ್ಚು ಸಹಾಯಧನವನ್ನು ವಿತರಿಸಲಾಗಿದೆ ಎಂದು ತಿಳಿಸಿದರು. 25 ರಂದು ಸಂಜೆ 4 ರಿಂದ 5 ಗಂಟೆಯವರೆಗೆ ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನ ವೈಭವ, ಸಂಜೆ 5 ರಿಂದ 6 ಗಂಟೆಯವರೆಗೆ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಜೆ 6 ರಿಂದ 8 ಗಂಟೆಯವರೆಗೆ ಸಭಾ ಕಾರ್ಯಕ್ರಮ ಜರುಗಲಿದೆ. ರಾತ್ರಿ 8 ಗಂಟೆಯಿಂದ ಗಾಯಕ ವಿಜಯಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಅವರನ್ನು ಒಳಗೊಂಡ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಚಿತ್ರನಟರಾದ ರವಿಚಂದ್ರನ್, ಯಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅಭಿನಂದನಾ ಸಮಿತಿ ಪ್ರಧಾನ ಸಂಚಾಲಕ ಸಂತೋಷ್ ವಿ. ಶೆಟ್ಟಿ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಡುಬಿದ್ರಿ, ಜಿಲ್ಲಾ ಸಂಚಾಲಕ ಎಂ. ಸುರೇಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾದ ದೇವಾನಂದ ಶೆಟ್ಟಿ, ದೇವಿಚರಣ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಇದ್ದರು. ಬೆಳ್ತಂಗಡಿಗೆ ₹26 ಲಕ್ಷ ಪ್ರವಾಹದಿಂದ ತತ್ತರಿಸಿರುವ ಬೆಳ್ತಂಗಡಿ ತಾಲ್ಲೂಕಿನ ಪುನರ್ ನಿರ್ಮಾಣ ಕಾರ್ಯಕ್ಕೆ ಇದೇ 25 ರಂದು ನಡೆಯುವ ಸಮಾರಂಭದಲ್ಲಿ ₹26 ಲಕ್ಷ ನೀಡಲಾಗುವುದು ಎಂದು ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು. ಪ್ರಕಾಶ್ ಶೆಟ್ಟಿ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು, ಅಲ್ಲಿ ನೀಡಲಾಗಿ ರುವ ₹1 ಲಕ್ಷ ಗೌರವಧನದ ಜತೆಗೆ ಇನ್ನೂ ₹25 ಲಕ್ಷ ಸೇರಿಸಿ ಒಟ್ಟು ₹26 ಲಕ್ಷ ಅನುದಾನವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಹಸ್ತಾಂತರಿಸಲಾಗುವುದು ಎಂದರು. ಈಗಾಗಲೇ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಪ್ರಕಾಶ್ ಶೆಟ್ಟಿ ಅವರು ₹1 ಕೋಟಿ ನೆರವು ನೀಡಿದ್ದಾರೆ ಎಂದರು. |