ಬಿಎಸ್‌ವೈ-ಅಶೋಕ ನಡುವಿನ ಶೀತಲ ಸಮರಕ್ಕೆ ಬಡ ನೇಕಾರರು ಬಲಿ

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್.ಅಶೋಕ ನಡುವಿನ ಶೀತಲ ಸಮರದಲ್ಲಿ  ಪ್ರವಾಹ ಸಂತ್ರಸ್ತ ನೇಕಾರರು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಮೂರು ತಿಂಗಳು ಅವಧಿಯಲ್ಲಿ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಸುರಪುರ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಜಲಾವೃತಗೊಂಡ ನದಿ ತೀರಗಳ ಗ್ರಾಮ ಮತ್ತು ಪಟ್ಟಣಗಳಲ್ಲಿನ ನೇಕಾರರ ಮನೆಗಳಲ್ಲಿ ನೀರು ನುಗ್ಗಿ ಅವರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಪ್ರವಾಹ ತೀವ್ರತೆ ಎಷ್ಟಿತ್ತು ಎನ್ನುವುದನ್ನು ಊಹಿಸಲು ಅಸಾಧ್ಯವಾದರೂ ಪ್ರವಾಹದಿಂದ ತೀವ್ರ ಹಾನಿಗೊಳಗಾದ ಇಬ್ಬರು ನೇಕಾರರು ಸಂಕಷ್ಟಕ್ಕೆ ಸಿಲುಕಿ ಬದುಕು ಸಾಗಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಇನ್ನೂ ಮಾಸಿಲ್ಲ. 

ಪ್ರವಾಹ ಪರಿಸ್ಥಿತಿ ವೇಳೆ ನೇಕಾರರ ಮನೆಗಳಿಗೆ ನುಗ್ಗಿದ ನೀರಿನಲ್ಲಿ ಕೈ ಮಗ್ಗ ಮತ್ತು ವಿದ್ಯುತ್ ಮಗ್ಗಗಳು ಸಂಪೂರ್ಣ ಮುಳುಗಿ ಹೋಗಿದ್ದವು. ನೇಕಾರರ ತಮ್ಮ ಜೀವನಕ್ಕಾಗಿ ಮಗ್ಗಗಳ ಮೇಲೆಯೇ ಲಕ್ಷಾಂತರ ರೂ. ಬಂಡವಾಳ ಹಾಕಿರುತ್ತಾರೆ. ಹೀಗೆ ಹಾಕಿದ  ಬಂಡವಾಳವನ್ನೆಲ್ಲ ಪ್ರವಾಹ ಆಹುತಿ ಪಡೆದಿದೆ. ಪ್ರವಾಹದಿಂದಾಗಿ ಬಾಗಲಕೋಟೆ ಜಿಲ್ಲೆಯ ಗೋವನಕೊಪ್ಪ, ಕಮತಗಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ, ಬೆಳಗಾವಿ ಜಿಲ್ಲೆಯ ಬೆಳಗಾವಿ ನಗರ, ರಾಮದುರ್ಗ, ಕಿಲಬನೂರ, ಹಲಗತ್ತಿ, ಸುರೇಬಾನ್ ಸೇರಿದಂತೆ ಅನೇಕ ಗ್ರಾಮ ಮತ್ತು ಪಟ್ಟಣಗಳಲ್ಲಿನ ಅಂದಾಜು 1700 ವಿದ್ಯುತ್ ಮಗ್ಗಗಳು, ನೂರಾರು ಕೈಮಗ್ಗಗಳು ನೀರಲ್ಲಿ ನಿಂತಿದ್ದವು.

ಪ್ರವಾಹ ಪರಿಸ್ಥಿತಿಯಿಂದಾಗಿ ನೇಕಾರರ ಬದುಕು ಬೀದಿಗೆ ಬಿದ್ದಿರುವುದನ್ನು ಮನಗಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿ ಪಾವರಲೂಮ್ ಮಗ್ಗಕ್ಕೆ ಪರಿಹಾರವಾಗಿ 25ಸಾವಿರ ರೂ. ಘೋಷಿಸಿದಾಗ ನೇಕಾರರು ಸ್ವಲ್ಪ ಮಟ್ಟಿಗೆ ಉಸಿರಾಡಲು ಆರಂಭಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತಗಳೂ ಹಾನಿಗೊಳಗಾದ ನೇಕಾರರ ಕುಟುಂಬಗಳು ಮತ್ತು ಅವರ ಮಗ್ಗಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದವು. ಇನ್ನೆನು ನೇಕಾರರ ಪ್ರತಿ ವಿದ್ಯುತ್ ಮಗ್ಗಕ್ಕೆ 25 ಸಾವಿರವಾದರೂ ಪರಿಹಾರ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಇದೀಗ ಕಂದಾಯ ಇಲಾಖೆ ಕಾರ್ಯದರ್ಶಿಗಳು ಹೊಸ ಆದೇಶವೊಂದನ್ನು ಹೊರಡಿಸಿ, ಪ್ರತಿ ವಿದ್ಯುತ್ ಮಗ್ಗಕ್ಕೆ 25 ಸಾವಿರ ರೂ. ಪರಿಹಾರವಲ್ಲ, ಪ್ರತಿ ಕುಟುಂಬಕ್ಕೆ 25 ಸಾವಿರ ಎಂದು ಪ್ರಕಟಣೆ ನೀಡಿದ್ದು, ನೇಕಾರರಿಗೆ ಗಾಯದ ಮೇಲೆ ಬರೆ ಎಳದಂತಾಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉಪ ಮುಖ್ಯಮಂತ್ರಿ ಸ್ಥಾನ ವಂಚಿತ ಕಂದಾಯ ಸಚಿವ ಆರ್. ಅಶೋಕ ಬಿಎಸ್‌ವೈ ಶೀತಲ ಸಮರದಲ್ಲಿ ನೇಕಾರರ ಬದುಕು ಸಿಲುಕಿಕೊಂಡಿದ್ದು ವಿಪರ‍್ಯಾಸವೇ ಸರಿ. ಸಿಎಂ ಪ್ರತಿ ವಿದ್ಯುತ್ ಮಗ್ಗಕ್ಕೆ 25 ಸಾವಿರ ರೂ. ಪರಿಹಾರ ಎಂದು ಘೋಷಿಸಿ ಸಮೀಕ್ಷೆ ನಡೆಸಿ, ಅಕ್ಟೋಬರ್ 18 ರಂದು ಅಧಿಕೃತ ಆದೇಶ ಹೊರಡಿಸಿ ತುರ್ತಾಗಿ ಪರಿಹಾರ ನೀಡಲು ಡಿಸಿಗಳಿಗೆ ಆದೇಶಿಸಲಾಗಿತ್ತು. ಆದರೆ ಅಕ್ಟೋಬರ್ 24 ರಂದು ಕಂದಾಯ ಇಲಾಖೆ ಕಾರ್ಯದರ್ಶಿಗಳು ಸಿಎಂ ಆದೇಶಕ್ಕೆ ತಿದ್ದುಪಡಿ ತಂದು ಆದೇಶಿಸಿರುವುದು ನೇಕಾರರ ಹೊಟ್ಟೆಗೆ ಹೊಡೆದಂತಾಗಿದೆ.

ಕಂದಾಯ ಇಲಾಖೆ ಕಾರ್ಯದರ್ಶಿಗಳ ಈ ನಿಲುವಿಗೆ ನೇಕಾರರ ಸಮುದಾಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಂದಾಯ ಇಲಾಖೆ ಕಾರ್ಯದರ್ಶಿಗಳ ನಿರ್ಧಾರ ವಿರೋಧಿಸಿ ಬೀದಿಗಿಳಿದು ಪ್ರತಿಟನೆಗೆ ಮುಂದಾಗಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿಗಳ ನಿರ್ಧಾರಿಂದ ಬಹುತೇಕ ನೇಕಾರರಿಗೆ  ತಾರತಮ್ಯವಾಗಲಿದೆ. ರಾಜ್ಯ ಸರ್ಕಾರ ನೇಕಾರರ ಪ್ರತಿಭಟನೆಗೆ ಮಣಿದು ಮೊದಲಿನ ಆದೇಶದಂತೆ ಪ್ರತಿ ವಿದ್ಯುತ್ ಮಗ್ಗಕ್ಕೆ 25 ಸಾವಿರ ಪರಿಹಾರ ನೀಡುತ್ತದೆಯೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!