ಉಡುಪಿ: ಬಜೆಟ್ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯ

ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ. ಕೃಷಿಗೆ ಹೆಚ್ಚಿನ ಮಹತ್ವ ನೀಡಿಲ್ಲ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು.

ಉಡುಪಿ: ಯೋಜನೆ ಅನುಷ್ಠಾನಗಳಿಗಾಗಿ ವಿಂಗಡಿಸಿದ ಅನುದಾನದ ಬಗ್ಗೆ ಸ್ಪಷ್ಟತೆಯಿಲ್ಲ. ಯಾವುದೇ ಹೊಸ ಯೋಜನೆಗಳಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ. ಕೃಷಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಕೃಷಿ ಉತ್ಪನ್ನ ದ್ವಿಗುಣಗೊಳ್ಳಲು ಯಾವುದೇ ಯೋಜನೆ ರೂಪಿಸಿಲ್ಲ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಜೀವನ ಚೈತ್ರ ಯಾತ್ರೆ ಯೋಜನೆ ಹಮ್ಮಿಕೊಂಡಿರುವುದು ಬಡವರಿಗೆ ಅನುಕೂಲವಾದರೂ ವಯಸ್ಸನ್ನು ನಿಗದಿಪಡಿಸಿರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ನಿರಾಶಾದಾಯಕ ಶಕ್ತಿ ಇಲ್ಲದ ಬಜೆಟ್  ಯೋಗೀಶ್ ವಿ ಶೆಟ್ಟಿ, ಜಿಲ್ಲಾಧ್ಯಕ್ಷರು ಜನತಾದಳ ಜಾತ್ಯತೀತ

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಹಕ್ಕಿನ ಅನುದಾನದ ಪಾಲನ್ನು ತರಲು ವಿಫಲರಾಗಿರುವ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಿಂದ ಯಾವುದೇ ಹೊಸತನವಿಲ್ಲದ ನಿರಾಶಾದಾಯಕ ಬಜೆಟ್ ಮಂಡನೆಯಾಗಿದೆ.ಕುಸಿಯುತ್ತಿರುವ ಆರ್ಥಿಕತೆಯನ್ನು ಎದ್ದು ನಿಲ್ಲಿಸುವ ಪ್ರಯತ್ನದ ಬದಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಮತ್ತೆ  ಬಡವರ ಮಧ್ಯಮ ವರ್ಗದವರ ಮೇಲೆ ಹೊರೆ ಬೀಳುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ ._

ರಾಜ್ಯ ಸರಕಾರದ ಬಜೆಟ್ ಅಭಿವೃದ್ಧಿಗೆ ಪೂರಕವಾದ ಬಜೆಟ್ : ಕುಯಿಲಾಡಿ ಸುರೇಶ್ ನಾಯಕ್ ಬಿಜೆಪಿ ಜಿಲ್ಲಾಧ್ಯಕ್ಷರು.

ಉಡುಪಿ :- ಮುಖ್ಯಮಂತ್ರಿ ಸನ್ಮಾನ್ಯ ಬಿ. ಎಸ್. ಯಡಿಯೂರಪ್ಪನವರು ಮಂಡಿಸಿದ ರಾಜ್ಯ ಸರಕಾರದ 2020-21 ಸಾಲಿನ ಬಜೆಟ್ ಅಭಿವೃದ್ಧಿಗೆ ಪೂರಕವಾದ ಸರ್ವವ್ಯಾಪಿ ಸರ್ವಸ್ಪರ್ಶಿಯಾದ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅವರು ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಸುಮಾರ್ಗ ಯೋಜನೆ, ಪಂಚಾಯತ್ ರಾಜ್ ಆಯುಕ್ತಾಲಯ ಆರಂಭ, ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಬಂದರುಗಳ ಅಭಿವೃದ್ಧಿ, ಯುವ ಸಬಲೀಕರಣಕ್ಕೆ ಹೊಸ ಯೋಜನೆ, ರಾಜ್ಯದ ಗೊಲ್ಲ ಸಮುದಾಯ, ಅಂಬಿಗಾ ಚೌಡಯ್ಯ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ ಮತ್ತು ಕಂಬಾರರ ಸಮುದಾಯಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡುವ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ಏಳಿಗೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.


ಕೃಷಿ ಸಾಲದ ಬಡ್ಡಿ ಮನ್ನಾ, ನೇಕಾರರ ಸಾಲದ ಬಡ್ಡಿ ಮನ್ನಾ ಮತ್ತು ರಾಜೀವ ಗಾಂಧಿ ವಸತಿ ಯೋಜನೆಗೆ ಅಡಮಾನ ವಿನಾಯಿತಿ ನೀಡುವ ಮೂಲಕ ಎಲ್ಲಾ ದೀನ ದಲಿತರ ಏಳಿಗೆಗೆ ಒತ್ತು ಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಜವಳಿ ಪಾರ್ಕ್ ಘೋಷಣೆ ಮಾಡುವ ಮೂಲಕ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ, ಎಸ್.ಸಿ./ಎಸ್.ಟಿ. ಯುವಕರಿಗೆ ಉಚಿತವಾಗಿ ಡ್ರೈವಿಂಗ್ ತರಭೇತಿ, ಅಡಿಕೆ ಬೆಳೆಗಾರರಿಗೆ ಎರಡು ಲಕ್ಷ ಹೊಸ ಸಾಲ ಯೋಜನೆ ಮತ್ತು ಮೀನುಗಾರ ಮಹಿಳೆಯರಿಗೆ ಸ್ಕೂಟರ್ ಸೌಲಭ್ಯ ನೀಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಜನಪರವಾದ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿಗೆ ಅತ್ಯಂತ ಪೂರಕವಾದ ಬಜೆಟ್ ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕುಯಿಲಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಮೀಣ ಕರ್ನಾಟಕವನ್ನು ಮರೆತ ರಾಜ್ಯ ಬಜೆಟ್ ಬಾಲಕೃಷ್ಣ ಶೆಟ್ಟಿ ಕಾರ್ಯದರ್ಶಿಸಿಪಿಐಎಂ, ಉಡುಪಿ ಜಿಲ್ಲಾ ಸಮಿತಿ


ಸುಮಾರು 238,000 ಕೋಟಿ ರೂಪಾಯಿ ಬಜೆಟ್ ನಲ್ಲಿ ಗ್ರಾಮೀಣ ಅಭಿವೃದ್ಧಿ ಗೆ ಮಿಸಲಿರಿಸಿದ ಹಣ ತೀರಾ ಕಡಿಮೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೂಡಿಕೆಯ ತಾರತಮ್ಯ ಹೆಚ್ಚಲಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆಪಾದಿಸಿದೆ. ಉಡುಪಿ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಕೇವಲ 250ರಿಂದ 300 ಕೋಟಿ ರೂಪಾಯಿ ವರೆಗಿನ ಹೂಡಿಕೆ ಕಾಣುತಿದೆ.
ಪೆಟ್ರೋಲ್, ಡೀಸೆಲ್ ಮತ್ತು ಲಘು ವಾಹನಗಳ ಮೇಲೆ ಹಾಕಿದ ತೆರಿಗೆ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಈಗಾಗಲೇ ವಿಪರೀತ ದರ ಹೆಚ್ಚಳವಾಗಿ ರುವ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹಾಕಿ 1500ಕೋಟಿ ರೂಪಾಯಿ ಸಂಗ್ರಹಿಸುವ ಬದಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಬರಬೇಕಾಗಿರುವ 15000 ಕೋಟಿ ರೂಪಾಯಿ ಸಂಗ್ರಹಿಸಲು ಒತ್ತಡ ಹೇರಬೇಕು.
ಒಟ್ಟಾರೆಯಾಗಿ ರಾಜ್ಯ ಬಜೆಟ್ ಜನ ಸಾಮಾನ್ಯರಿಗೆ ಪರಿಹಾರ ನೀಡದೆ, ಖಾಸಗಿ ಉದ್ದಿಮೆದಾರರಿಗೆ ಅನುಕೂಲವಾಗಿದೆ. ಇದನ್ನು ವಿರೋಧಿಸಬೇಕಾಗಿದೆ.

ಅಭಿವೃದ್ಧಿಗೆ ಪೂರಕವಾದ ರಾಜ್ಯವನ್ನು ಸಮೃದ್ಧಿಯತ್ತ ಕೊಂಡೊಯ್ಯುವ ಅತ್ಯುತ್ತಮ ಬಜೆಟ್ – ಮಟ್ಟಾರ್ ರತ್ನಾಕರ ಹೆಗ್ಡೆ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮಂಡಿಸಿದ ಅಯವ್ಯಯ ರಾಜ್ಯದ ಅಭಿವೃದ್ಧಿಗಾಗಿ ಮತ್ತು ರಾಜ್ಯವನ್ನು ಸಮೃದ್ಧಿಯತ್ತ ಕೊಂಡೊಯ್ಯುವ, ಸಮಾಜದ ಎಲ್ಲಾ ವರ್ಗದ, ಹಿಂದುಳಿದ ವರ್ಗ ಮತ್ತು ಸಮಾಜದ ಕೆಳವರ್ಗದ ಜನರನ್ನು ಗುರುತಿಸಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಕರ್ನಾಟಕ ಸರಕಾರ ಇದರ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ಟಪಡಿಸಿದ್ದಾರೆ. ಈ ಬಜೆಟ್‌ನಲ್ಲಿ ಮೀನುಗಾರಿಕ ಬಂದರುಗಳ ಅಭಿವೃದ್ಧಿಗೆ, ಕೃಷಿ ಸಾಲ ಮನ್ನದೊಂದಿಗೆ ಬಡ್ಡಿ ರಹಿತ ಹೊಸ ಕೃಷಿ ಸಾಲವನ್ನು ಕೊಡುವ, ರೈತರಿಗೆ ಆಶಾದಾಯಕವಾದ ಬಜೆಟ್ ಇದಾಗಿದೆ ಎಂದ ಅವರು ಈ ಹಿಂದಿನ ಸರಕಾರದ ಎಲ್ಲಾ ಜನಪ್ರಿಯ ಯೋಜನೆಗಳನ್ನು ಮುಂದುವರೆಸಿರುವ ಮಾನ್ಯ ಮುಖ್ಯಮಂತ್ರಿಗಳು ಕಿಸಾನ್ ಸಮ್ಮಾನ್ ಯೋಜನೆ, ಕಿಂಡಿ ಅಣೆಕಟ್ಟು ಅಭಿವೃದ್ಧಿ, ಇಸ್ರೆಲ್ ಮಾದರಿ ನೀರಾವರಿ ಯೋಜನೆಗಳಿಗೆ ಒತ್ತು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವಳಿ ಪಾರ್ಕ, ಪ್ರತಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮುಂತಾದ ಯೋಜನೆಗಳೊಂದಿಗೆ ಯುವಕರಿಗೆ, ರೈತರಿಗೆ, ಮೀನುಗಾರರಿಗೆ ಅತೀ ಹೆಚ್ಚು ಉತ್ತೇಜನೆ ನೀಡಿದ ಕರಾವಳಿಯ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಹೆಗ್ಡೆಯವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಹಣಕಾಸು ಸಚಿವರೂ ಆದ ಮುಖ್ಯ ಮಂತ್ರಿಗಳನ್ನು ಅಭಿನಂದಿಸಿದ್ದಾರೆ.

ಮೀನುಗಾರಿಕಾ ಅಭಿವೃದ್ಧಿಗೆ ಪೂರಕ ಬಜೆಟ್ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮಂಗಳೂರು

ಕರಾವಳಿ ಕರ್ನಾಟಕದ ಪ್ರಮುಖ ಮೀನುಗಾರಿಕಾ ಬಂದರುಗಳಾದ ಹೆಜಮಾಡಿ, ಹಂಗಾರಕಟ್ಟೆ, ಮರವಂತೆ, ತೆಂಗಿನಗುಂಡಿ, ಕಾರವಾರ ಬಂದರುಗಳ ಅಭಿವೃದ್ಧಿಗೆ ಸುಮಾರು ೪೦೭ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವ ಮೂಲಕ ಮೀನುಗಾರಿಕೆ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬಲು ಸರಕಾರ ಮುಂದಾಗಿದೆ.
ಮೀನುಗಾರಿಕೆಯಲ್ಲಿ ತಾಂತ್ರಿಕತೆ ಅಳವಡಿಕೆಗೆ ಉತ್ತೇಜನಕ್ಕಾಗಿ ಕರ್ನಾಟಕ ಮತ್ಸ್ಯ ವಿಕಾಸ ಯೋಜನೆಯಡಿ ೧.೫ ಕೋಟಿ ಹಾಗೂ ಮಹಿಳಾ ಮೀನುಗಾರರ ಸಬಲೀಕರಣ ನಿಟ್ಟಿನಲ್ಲಿ ೧ ಸಾವಿರ ಮಹಿಳೆಯರಿಗೆ ದ್ವಿಚಕ್ರ ವಾಹನ ಖರೀದಿಗೆ ೫ ಕೋಟಿ ಅನುದಾನ ಹಾಗೂ ಕುಳಾಯಿ ಬಂದರಿನಲ್ಲಿ ೧೨.೫ ಕೋಟಿ ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆಗೆ ಮುಂದಾಗುವ ಮೂಲಕ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಮುಂದಡಿಯಿಟ್ಟಿದೆ.


ಕರ್ನಾಟಕ ಬಜೆಟಿನಲ್ಲಿ ಶಿಕ್ಷಣಕ್ಕಿಲ್ಲ ಆದ್ಯತೆ – ಎಸ್.ಐ.ಓ ಕರ್ನಾಟಕ
ಬೆಂಗಳೂರು: ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ನೇತೃತ್ವದಲ್ಲಿ 2020ರ ಸಾಲಿನ ಬಜೆಟ್ ಮಂಡಿಸಿದ್ದು ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದ್ದು ಮೇಲ್ನೊಟ್ಟಕ್ಕೆ ಕಾಣಿಸುತ್ತಿದೆ. ಈ ಬಾರಿ ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿಯಲ್ಲಿಯೇ ತಿಳಿಸಿರುವಂತೆ ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಯಾವುದೇ ಪ್ರಸ್ತಾಪ ಈ ಬಜೆಟಿನಲ್ಲಿಲ್ಲ. ಮುಖ್ಯಮಂತ್ರಿಯವರು ಸ್ವತಃ ಬಜೆಟ್ ಭಾಷಣದಲ್ಲಿ ಹೇಳಿರುವಂತೆ ದೇಶದ ಅರ್ಥಿಕ ಸ್ಥಿತಿ ಉತ್ತಮವಾಗಿರದ ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡಿ ಬಜೆಟಿನ ಒಂದು ದೊಡ್ಡ ಪಾಲನ್ನು ಮೀಸಲಿಡಬೇಕಾಗಿತ್ತು. ಆದರೆ ಮಂಡನೆಯಾದ ಈ ಬಜೆಟಿನಲ್ಲಿ ಎರಡು ಕ್ಷೇತ್ರವನ್ನು ಕಡೆಗಣಿಸಿರುವುದು ಸರಕಾರದ ಅಸಡ್ಡೆ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಶಿಕ್ಷಣದ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೂ ದೊಡ್ಡ ಅನ್ಯಾಯವಾಗಿದ್ದು ರಾಯಚೂರು ವಿಶ್ವವಿದ್ಯಾಲಯ ಮತ್ತು ಜನರ ಬೇಡಿಕೆಯಂತೆ ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜೊಂದನ್ನು ನೀಡಲು ವಿಫಲವಾಗಿದೆ. ಕೆಲವೊಂದು ಚಾಲ್ತಿಯಲಿದ್ದ ಯೋಜನೆಗಳನ್ನೇ ಸರಕಾರ ಈ ಬಾರಿಯ ಬಜೆಟಿನಲ್ಲಿ ಪ್ರಸ್ತಾಪಿಸಿದ್ದು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಯಾವುದೇ ನೂತನ ಯೋಜನೆಗಳು ಈ ಬಜೆಟಿನಲ್ಲಿ ಕಾಣಲು ಸಿಗುತ್ತಿಲ್ಲ.
ಈಗಾಗಲೇ ಕಳೆದ ಮಳೆಗಾಲದಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ 23 ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ ಸುಮಾರು 7777 ಶಾಲೆಗಳು ಹಾನಿಕ್ಕೊಳಗಾಗಿದ್ದವು. ಈ ಸಂಬಂಧ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದ್ದು ಈ ಶಾಲೆಗಳ ದುರಸ್ತಿಗೆ ಸ್ವತಃ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ತಕ್ಷಣಕ್ಕೆ 1500 ಕೋಟಿಗಳ ಪ್ರಸ್ತಾವನೆ ಇಟ್ಟಿದ್ದರು ಆದರೆ ಇದೀಗ ಈ ಬಜೆಟಿನಲ್ಲಿ ಸರಕಾರ ಶಾಲೆಗಳ ದುರಸ್ತಿಗೆ ಕೇವಲ 758 ಕೋಟಿ ಮೀಸಲಿಟ್ಟಿದೆ. ಈ ಅನುದಾನದಿಂದ ಸೂಕ್ತ ಸಮಯದಲ್ಲಿ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ ಇದರಿಂದ ವಿದ್ಯಾರ್ಥಿಗಳು ತೊಂದರೆಗೆ ಒಳಪಡಲಿದ್ದಾರೆ.
400 ಸರಕಾರಿ ಉರ್ದು ಶಾಲೆಗಳಲ್ಲಿ ಉರ್ದುವಿನೊಂದಿಗೆ ಆಂಗ್ಲ ಮಾಧ್ಯಮ ನಡೆಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.ಈ ಮುಂಚೆ ಉರ್ದು ಶಾಲೆಯ ಅಭಿವೃದ್ದಿ ನಡೆಸಲು ಅಲ್ಪಸಂಖ್ಯಾತ ಇಲಾಖೆಗೆ ಜವಾಬ್ದಾರಿ ನೀಡಲಾಗಿತ್ತು. ಅದು ಯಾವ ರೀತಿ ಅಭಿವೃದ್ಧಿಗೆ ಶ್ರಮಿಸಿದೆ ಎಂಬ ಬಗ್ಗೆ ಯಾವುದೇ ಅಧ್ಯಯನ ವರದಿ ನೀಡದೆ ಏಕಾಏಕಿ ಆಂಗ್ಲ ಮಾಧ್ಯಮದ ಪ್ರಸ್ತಾಪ ಮಾಡಲಾಗಿದೆ. ಅದು ಕೂಡ ಕೇವಲ ಒಂದು ಕೋಟಿ ರೂಪಾಯಿ ಅನುದಾನ ಮೀಸಲಿಟ್ಟು ಕಣ್ಣಿಗೆ ಮಣ್ಣೆರೆಚುವ ಕೆಲಸ ಸರಕಾರ ನಡೆಸಿದೆ. ಈ ಬಜೆಟಿನಲ್ಲಿ ಮದ್ರಸಾ ಶಿಕ್ಷಣದ ಆಧುನೀಕರಣದ ಹಿನ್ನಲೆಯಲ್ಲೂ ಸೂಕ್ತವಾದ ಅನುದಾನವನ್ನು ಸರಕಾರ ನೀಡದಿರುವುದು ತಾರತಮ್ಯ ನೀತಿಯನ್ನು ಎತ್ತಿಹಿಡಿದಿದೆ. ಈ ಬಜೆಟಿನಲ್ಲಿ ಶಿಕ್ಷಣದ ಹಕ್ಕು ಕಾಯಿದೆಯಡಿಯಲ್ಲಿ ಕಡ್ಡಾಯವಾಗಿ ಆಗಬೇಕಾದ ವಿಚಾರಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕಾಯಿದೆ ಅನುಷ್ಠಾನಕ್ಕೆ ಬಂದು ಹತ್ತು ವರ್ಷವಾದ ಮೇಲೆ ಅದರ ಅನುಷ್ಟಾನದ ಪರಿಣಾಮದ ಬಗ್ಗೆ ತಿಳಿಯಲು ಯಾವುದೇ ಯೋಜನೆಯನ್ನು ಪ್ರಸ್ತಾಪಿಸದಿರುವುದು ವಿಪರ್ಯಾಸವಾಗಿದೆ.

ಈ ಬಜೆಟಿನಲ್ಲಿ ಶಿಕ್ಷಣ ಸಂಬಂಧಿ ಸ್ವಾಗತರ್ಹ ಸಂಗತಿಯೆಂದರೆ “ಸಂಭ್ರಮ ಶನಿವಾರ”ದ ಹೆಸರಿನಲ್ಲಿ ತಿಣಗಳಿನಲ್ಲಿ ಎರಡು ಶನಿವಾರ ಬ್ಯಾಗ್ ರಹಿತವಾಗಿ ಮಕ್ಕಳು ಶಾಲೆಗೆ ಬರುವುದರ ಬಗ್ಗೆ ಪ್ರಸ್ತಾಪಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ
ಒಟ್ಟಿನಲ್ಲಿ 2020 ರ ಕರ್ನಾಟಕ ಬಜೆಟ್ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದ್ದು ಕೆಲವೊಂದು ಯೋಜನೆಗಳನ್ನು ಪ್ರಸ್ತಾಪಿಸಿ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಶ್ರೈಕ್ಷಣಿಕ ಕ್ಷೇತ್ರಕ್ಕೆ ಈ ಬಜೆಟ್ ಸೂಕ್ತವಾಗಿ ಸ್ಪಂದಿಸಿಲ್ಲವೆಂದು ಎಸ್.ಐ.ಓ ಕರ್ನಾಟಕ ಅಭಿಪ್ರಾಯ ಪಟ್ಟಿದೆ.

                                                                                                   



Leave a Reply

Your email address will not be published. Required fields are marked *

error: Content is protected !!