ಲಾಠಿ ಬಿಟ್ಟು ಕೆಲಸ ಮಾಡಲು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆ
ಬೆಂಗಳೂರು: ನಗರದಲ್ಲಿ ನಿಷೇಧಾಜ್ಞೆ ನಡುವೆಯೇ ಪೊಲೀಸರು ಸಿಕ್ಕ ಸಿಕ್ಕವರ ಮೇಲೆ ಲಾಠಿ ಬೀಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ಲಾಠಿ ಬಿಟ್ಟು ಕೆಲಸ ಮಾಡುವಂತೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ.
ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಬೆಂಗಳೂರ ಸಹ ಸ್ತಬ್ಧವಾಗಿದೆ. ಅಗತ್ಯ ವಸ್ತು ಖರೀದಿಸಲು ಹಾಗೂ ವೈದ್ಯಕೀಯ ಸೇರಿ ಅಗತ್ಯ ಸೇವೆ ಪಡೆಯಲು ಹೋಗುವರ ಮೇಲೂ ಹಲವೆಡೆ ಪೊಲೀಸರು ಲಾಠಿ ಬೀಸಿದ್ದಾರೆ.
ಈ ಬಗ್ಗೆ ಹಲವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಜಕೀಯ ಮುಖಂಡರೂ ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಭಾಸ್ಕರ್ ರಾವ್, ‘ಎಲ್ಲ ಪೊಲೀಸರು ಲಾಠಿ ಬಿಟ್ಟು ಕೆಲಸ ಮಾಡಬೇಕು. ರಸ್ತೆಯಲ್ಲಿ ಯಾರೇ ಬಂದರೂ ಸೌಜನ್ಯದಿಂದ ಮಾತನಾಡಿಸಬೇಕು. ಅವರ ಉದ್ದೇಶವನ್ನುತಿಳಿದುಕೊಂಡು ಮುಂದುವರಿಯಬೇಕು’ ಎಂದು ಖಡಕ್ ಸೂಚನೆ ನೀಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಲಾಠಿಯನ್ನು ಠಾಣೆಯಲ್ಲೇ ಬಿಟ್ಟು ಸಮವಸ್ತ್ರದಲ್ಲಿ ಕರ್ತವ್ಯದ ಸ್ಥಳಕ್ಕೆ ಬರಬೇಕು’ ಎಂದಿದ್ದಾರೆ.
ಸಂಚಾರ ಪೊಲೀಸರು ಲಾಠಿ ಹಿಡಿಯಬಾರದು: ‘ಸಂಚಾರ ಪೊಲೀಸರೂ ಲಾಠಿ ಹಿಡಿದು ಕೆಲಸ ಮಾಡುತ್ತಿರುವುದು ಕಂಡಿದೆ. ಇನ್ನು ಮುಂದೆ ಸಂಚಾರ ಪೊಲೀಸರು ಲಾಠಿ ಹಿಡಿಯಬಾರದು’ ಎಂದು ಕಮಿಷನರ್ ಹೇಳಿದ್ದಾರೆ.
‘ನಗರ ಸಶಸ್ತ್ರ ಮೀಸಲು ಪಡೆ ಹಾಗೂ ರಾಜ್ಯ ಪೊಲೀಸ್ ಮೀಸಲು ಪಡೆ ಸಿಬ್ಬಂದಿ ಮಾತ್ರ ಲಾಠಿ ಬಳಸಬಹುದು’ ಎಂದಿದ್ದಾರೆ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ‘ಹಗಲು- ರಾತ್ರಿ ಎನ್ನದೇ ಕರ್ತವ್ಯದಲ್ಲಿರುವ ಎಲ್ಲ ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಕಮಿಷನರ್ ಸಲಹೆ ನೀಡಿದ್ದಾರೆ.
‘ಪೊಲೀಸರು ಮಾಸ್ಕ್ ಹಾಕಿಕೊಳ್ಳಬೇಕು. ಆಗಾಗ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು. ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದಿದ್ದಾರೆ.
ಬಿಕೋ ಎನ್ನುತ್ತಿರುವ ರಸ್ತೆಗಳು: ನಿಷೇಧಾಜ್ಞೆಯಿಂದಾಗಿ ಬೆಂಗಳೂರಿನ ಮೆಜೆಸ್ಟಿಕ್, ಎಂ.ಜಿ.ರಸ್ತೆ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ಶಾಂತಿನಗರ, ಕೋರಮಂಗಲ ಹಾಗೂ ಸುತ್ತಮುತ್ತಲ ಪ್ರಮುಖ ರಸ್ತೆಗಳು ವಾಹನ ಹಾಗೂ ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿವೆ.
ದಿನದ 24 ಗಂಟೆಯೂ ವಾಹನಗಳ ದಟ್ಟಣೆ ಹಾಗೂ ಜನಸಂದಣಿ ಇರುತ್ತಿದ್ದ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣವೂ ಬಿಕೋ ಎನ್ನುತ್ತಿತ್ತು. ಆಶ್ರಯ ಇಲ್ಲದ ನಿರ್ಗತಿಕರು ಬಿಟ್ಟರೆ ಬೇರೆ ಯಾರೊಬ್ಬರೂ ಈ ನಿಲ್ದಾಣಗಳಲ್ಲಿ ಇರಲಿಲ್ಲ. ಪೊಲೀಸರು ಹಾಗೂ ಕೆಲ ಸಂಘಟನೆಗಳ ಸದಸ್ಯರೇ ನಿಲ್ದಾಣಕ್ಕೆ ಬಂದು ನಿರ್ಗತಿಕರಿಗೆ ಊಟ ಹಾಗೂ ಟೀ ಕೊಟ್ಟು ಹೋದರು