ಕೋವಿಡ್ ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಗುರುವಾರದಿಂದ ಆಯ್ದ ಸೇವೆಗಳಿಗೆ ಅನುಮತಿ
ಬೆಂಗಳೂರು: ಕೊರೊನಾ ಕಂಟೈನ್ಮೆಂಟ್ ಅಲ್ಲದ ವಲಯಗಳಲ್ಲಿ ಆಯ್ದ ಕೆಲವು ಸೇವೆಗಳಿಗೆ ನಾಳೆಯಿಂದ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇವುಗಳಲ್ಲಿ ಕೊರಿಯರ್, ನಿರ್ಮಾಣ ಕಾರ್ಯ, ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆ.
‘ಸಾರ್ವಜನಿಕರಿಗಾಗುವ ತೊಂದರೆಯನ್ನು ಕಡಿಮೆ ಮಾಡುವ ಸಲುವಾಗಿ ಆಯ್ದ ಹೆಚ್ಚುವರಿ ಚಟುವಟಿಕೆಗಳಿಗೆ 23ರಿಂದ ಅವಕಾಶ ನೀಡಲಾಗುವುದು’ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಬುಧವಾರ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಕಟ್ಟಡ ನಿರ್ಮಾಣ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸ್ಥಳದಲ್ಲಿರುವ ಕಾರ್ಮಿಕರನ್ನೇ ಬಳಸಿಕೊಂಡು ಚಟುವಟಿಕೆ ನಡೆಸಬೇಕು, ಬೇರೆಡೆಯಿಂದ ಕರೆಸಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.
ಸ್ವ ಉದ್ಯೋಗಿಗಳಾದ ಎಲೆಕ್ಟ್ರಿಷಿಯನ್, ಐಟಿ ದುರಸ್ತಿ, ಪ್ಲಂಬರ್, ಮೆಕ್ಯಾನಿಕ್, ಬಡಗಿಗಳಿಗೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ.
ಔಷಧ, ವೈದ್ಯಕೀಯ ಸೇವೆ, ವೈದ್ಯಕೀಯ ಉಪಕರಣ ಮತ್ತು ಅವುಗಳ ಕಚ್ಚಾ ಸಾಮಗ್ರಿ, ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳಲ್ಲಿ ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ.
ವಿಮಾನ, ಬಸ್, ಮೆಟ್ರೊ ರೈಲು, ಅಂತರ ಜಿಲ್ಲೆ, ಅಂತರರಾಜ್ಯ ಪ್ರಯಾಣ ನಿಷೇಧ ಮೇ 3ರ ವರೆಗೂ ಮುಂದುವರಿಯಲಿದೆ. ಶಾಪಿಂಗ್ ಮಾಲ್‌ಗಳು, ಚಿತ್ರ ಮಂದಿರಗಳು, ಬಾರ್‌ಗಳ ಬಂದ್ ಮುಂದುವರಿಯಲಿದೆ. ಧಾರ್ಮಿಕ ಕೇಂದ್ರಗಳೂ ಮೇ 3ರ ವರೆಗೆ ತೆರಯುವಂತಿಲ್ಲ.