ಪೇಜಾವರಶ್ರೀ ಆರೋಗ್ಯದಲ್ಲಿ ಚೇತರಿಕೆ, 2ನೇ ಹೆಲ್ತ್ ಬುಲೆಟಿನ್ ರಿಲೀಸ್
ಉಡುಪಿ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕೆಎಂಸಿ ಮಣಿಪಾಲದ ಹಿರಿಯ ವೈದ್ಯೆ ಡಾ. ಸುಧಾ ವಿದ್ಯಾಸಾಗರ್ ಹೇಳಿದ್ದಾರೆ.
ದಿನದ 2ನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಅವರು, ಉಸಿರಾಟದ ಸಮಸ್ಯೆಯಿಂದ ಸ್ವಾಮೀಜಿ ಕೆಎಂಸಿಗೆ ಬೆಳಗ್ಗೆ ದಾಖಲಾಗಿದ್ದರು. ಈಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವಾಗ ಬಹಳ ಸಮಸ್ಯೆಯಿತ್ತು ಎಂದು ಹೇಳಿದರು.
ಶ್ರೀಗಳಿಗೆ ವೆಂಟಿಲೇಟರ್ ಅಳವಡಿಸಿದ್ದೇವೆ, ಚೇತರಿಸಿಕೊಳ್ಳಲು ಮದ್ದುಗಳನ್ನು ಹಾಕಿರುವುದರಿಂದ ಅಮಲಿನಲ್ಲಿ ಇದ್ದಾರೆ ಎಂದು ಡಾ. ಸುಧಾ ವಿದ್ಯಾಸಾಗರ್ ಹೇಳಿದರು.
ಪೇಜಾವರ ಶ್ರೀಗಳಿಗೆ ಕೆಎಂಸಿಯ ಆರು ತಜ್ಞ ವೈದ್ಯರಿಂದ ಚಿಕಿತ್ಸೆ ಸಿಗುತ್ತಿದೆ. ಡಾ. ಸುಧಾ ವಿದ್ಯಾಸಾಗರ್ ವೈದ್ಯರ ತಂಡದ ನೇತೃತ್ವ ವಹಿಸಿದ್ದು, ರವಿರಾಜ್ ಆಚಾರ್ಯ, ಡಾ. ಶ್ವೇತಪ್ರಿಯ, ಡಾ. ಮಂಜುನಾಥ ಹಂದೆ, ಡಾ. ಪದ್ಮಕುಮಾರ್, ಡಾ. ವಿಶಾಲ್ ಶಾನುಭೋಗ್ 24 ಗಂಟೆ ನಿಗಾ ವಹಿಸಲಿರುವ ವೈದ್ಯರು. ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಶ್ರೀಗಳ ಚಿಕಿತ್ಸೆಯ ಸಂಪೂರ್ಣ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿದ್ದಾರೆ.
ಶ್ರೀಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಸಂದರ್ಶಕರು ಹೆಚ್ಚಾಗಿ ಬರುತಿದ್ದಾರೆ. ಇದರಿಂದ ಅಡಚಣೆಯಾಗುತ್ತಿದೆ. ದಯವಿಟ್ಟು ಸಂದರ್ಶಕರು ಆಸ್ಪತ್ರೆಗೆ ಭೇಟಿ ನೀಡುವುದು ಬೇಡ. ಶ್ರೀಗಳ ಆರೋಗ್ಯದ ಮಾಹಿತಿಯನ್ನು ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ಹೆಲ್ತ್ ಬುಲೆಟಿನ್ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದರು.
I want in English