ಪೇಜಾವರಶ್ರೀ ಚೇತರಿಕೆ: 5ನೇ ಹೆಲ್ತ್ ಬುಲೆಟಿನ್ ರಿಲೀಸ್
ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ. ಕಳೆದ 48 ಗಂಟೆಯಲ್ಲಿ ಹೆಚ್ಚು ಚೇತರಿಸಿಕೊಂಡಿದ್ದು, ಮಣಿಪಾಲ ಕೆಎಂಸಿ ಬಾಳಿಗಾ ಬ್ಲಾಕ್ ಐಸಿಯುನಲ್ಲಿ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀಗಳ ಎದೆಯಲ್ಲಿ ಕಟ್ಟಿದ ಕಫ ನಿಧಾನವಾಗಿ ಕರಗುತ್ತಿದೆ. ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ, ಎರಡು ದಿನದಿಂದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದು ಸ್ವಾಮೀಜಿ ಆಪ್ತ ಸಹಾಯಕ ವಿಷ್ಣುಮೂರ್ತಿ ಆಚಾರ್ಯ ಹೇಳಿದ್ದಾರೆ.
ವಿಶ್ವಪ್ರಸನ್ನ ತೀರ್ಥರಿಂದ ವಿಶೇಷ ಪೂಜೆ: ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಪೇಜಾವರ ಮಠದಲ್ಲಿ ಪೂಜೆ, ಪುನಸ್ಕಾರ ಮುಂದುವರಿದಿದೆ. ಪೇಜಾವರ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೇವರಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ, ಹಿರಿಯ ಶ್ರೀಗಳು ಆರೋಗ್ಯವಂತರಾಗಿ ಮಠಕ್ಕೆ ವಾಪಸ್ ಆಗಬೇಕು ಎಂದು ದೇವರಲ್ಲಿ ಕೇಳಿಕೊಂಡಿದ್ದಾರೆ. ಪೂಜೆಯಲ್ಲಿ ಮಠದ ಶಿಷ್ಯರು, ಸಿಬ್ಬಂದಿ ಭಾಗಿಯಾಗಿದ್ದಾರೆ. ಹೆಲ್ತ್ ಬುಲೆಟಿನ್ ರಿಲೀಸ್: ಕೆಎಂಸಿ ಆಸ್ಪತ್ರೆ ಐದನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. ವೈದ್ಯರು 48 ಗಂಟೆಗಳ ಅವಲೋಕನಾ ಅವಧಿ ಮುಗಿಸಿದ್ದು, ಈ ಹೆಲ್ತ್ ಬುಲೆಟಿನ್ ಬಹಳ ಮಹತ್ವ ಪಡೆದಿದೆ. |