ಶ್ರೀಗಳು ಕಣ್ಣುಬಿಡುತ್ತಿದ್ದು, ಸಹಜವಾಗಿ ಉಸಿರಾಡಲು ಯತ್ನಿಸುತ್ತಿದ್ದಾರೆ: ಸಿಎಂ
ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯವನ್ನು ಶನಿವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಚಾರಿಸಿದರು.
ಮಧ್ಯಾಹ್ನ ಆಸ್ಪತ್ರೆಗೆ ಆಗಮಿಸಿದ ಅವರು, ಆಸ್ಪತ್ರೆ ವೈದ್ಯರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೇಜಾವರ ಶ್ರೀ ಶೀಘ್ರ ಗುಣಮುಖರಾಗಿ ಶ್ರೀ ಕೃಷ್ಣನ ಪೂಜೆ ಮಾಡಬೇಕು. ಅದನ್ನು ನಾವು, ಭಕ್ತರೆಲ್ಲ ನೋಡಬೇಕು. ಎಲ್ಲಾ ತಜ್ಞ ವೈದ್ಯರು ಅವರ ಆರೋಗ್ಯ ಸುಧಾರಣೆಗೆ ಪ್ರಯತ್ನ ಪಡುತ್ತಿ ದ್ದಾರೆ. ಶ್ರೀಗಳು ಕಣ್ಣುಬಿಡುತ್ತಿದ್ದು, ಸಹಜವಾಗಿ ಉಸಿರಾಡಲು ಯತ್ನಿಸುತ್ತಿದ್ದಾರೆ ಎಂದ ಸಿಎಂ ತಿಳಿಸಿದರು.
ಭಕ್ತರಲ್ಲಿ ಪ್ರಾರ್ಥನೆ ಮಾಡುತ್ತೇನೆ ಯಾರೂ ಆಸ್ಪತ್ರೆಗೆ ಬಂದು ತೊಂದರೆ ಕೊಡೊದು ಬೇಡ. ಅವರ ಆರೋಗ್ಯ ಸುಧಾರಣೆ ಬಳಿಕ ನಾವೆಲ್ಲ ಮಠಕ್ಕೆ ಬಂದು ಭೇಟಿ ಆಗೋಣ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರೂ ಪ್ರಾರ್ಥಿಸಿದ್ದಾರೆ. ಅವರ ಅಪೇಕ್ಷೆಯಂತೆ ರಾಮ ಮಂದಿರ ನಿರ್ಮಾಣ ಸಂಕಲ್ಪ ಈಡೇರುತ್ತಿದೆ. ಈ ಸುಸಂದರ್ಭದಲ್ಲಿ ಅವರು ಬದುಕಿರಬೇಕು ಎಂದರು.
ನಾವು ಕಂಡಂತ ಅಪರೂಪದ ಸನ್ಯಾಸಿ. ಧರ್ಮ ಜಾಗೃತಿಗಾಗಿ ದೇಶದ ಉದ್ದಕ್ಕೆ ಸಂಚರಿಸಿದ್ದಾರೆ. ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಪೇಜಾವರ ಶ್ರೀಗಳ ಆರೋಗ್ಯ ಆದಷ್ಟು ಬೇಗ ಸುಧಾರಣೆ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಸಿಎಂ ಆಗಮನ ಹಿನ್ನೆಲೆಯಲ್ಲಿ ಉಡುಪಿ ನಗರ ಮತ್ತು ಕೆಎಂಸಿ ಆಸ್ಪತ್ರೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಸಿಎಂ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಗೋವಿಂದ ಕಾರಜೋಳ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರಿದ್ದರು