PAYCM ಮಾದರಿಯಲ್ಲೇ ಸಚಿವ ಚಲುವರಾಯ ಸ್ವಾಮಿ ವಿರುದ್ಧ ʼPaycsʼ ಅಭಿಯಾನ ಆರಂಭಿಸಿದ ಬಿಜೆಪಿ
ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ʼಪೇ ಸಿಎಂʼ ಮಾದರಿಯಲ್ಲೇ ಇದೀಗ ಬಿಜೆಪಿ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್ (Paycs) ಪೋಸ್ಟರ್ ಅಭಿಯಾನ ಆರಂಭಿಸಿದೆ.
ಮಂಡ್ಯ ಜಿಲ್ಲೆಯ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರಿಗೆ ಸಚಿವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳೇ ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರದ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತಿದ್ದು, ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ Paycs ಪೋಸ್ಟರ್ ಹರಿದಾಡುತ್ತಿದೆ.
ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಈ ಹಿಂದೆ ಕಾಂಗ್ರೆಸ್ ಮಾಡಿದಂತೆಯೇ ‘ಪೇ ಸಿಎಸ್’ ಎಂಬ ಕ್ಯೂ ಆರ್ ಕೋಡ್ ಪೋಸ್ಟರ್ ಕಾಣಿಸಿಕೊಂಡಿದೆ. “ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ಸ್ಕ್ಯಾನ್ ಮಾಡಿ ಧಾರಾಳವಾಗಿ ಲಂಚ ಪಾವತಿ ಮಾಡಿ, ಧನ್ಯವಾದಗಳು. ಇಂತಿ ನಿಮ್ಮ ಭ್ರಷ್ಟ ಚೆಲುವರಾಯನ ಸ್ವಾಮಿ ಅಲಿಯಾಸ್ ಲಂಚ ಸ್ವಾಮಿ. #corruptcongress” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಇನ್ನು ಮಂಡ್ಯ ಜಿಲ್ಲೆಯ ಹಲವು ಕಡೆಗಳಲ್ಲಿ ಗೋಡೆಗಳಿಗೆ ಬಿಜೆಪಿ ಕಾರ್ಯಕರ್ತರು ʼPaycsʼ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದಾರೆ.