ಪಲಿಮಾರು: ಸಂತ ಪಿಯೂಸ್ ದೇವಾಲಯದ ವತಿಯಿಂದ 300 ಕಿಟ್ ಪಂಚಾಯತ್ ಗೆ ಹಸ್ತಾಂತರ
ಪಲಿಮಾರು : (ಉಡುಪಿ ಟೈಮ್ಸ್ ವರದಿ) ಕೋರೋನ ಮಹಾಮಾರಿಯಿಂದ ವಿಶ್ವವೇ ತತ್ತರಿಸಿದ್ದು, ದೇಶವನ್ನು ದ್ವಿತೀಯ ಹಂತದ ಲಾಕ್ ಡೌನ್ಗೆ ಮುಂದುವರಿಸಲಾಗಿದೆ. ಕೊರೋನ ರೋಗದಿಂದ ಜನರು ಮನೆಯಿಂದ ಹೊರಗೆ ಬರಬಾರದ ಪರಿಸ್ಥಿತಿ ಬಂದಿದ್ದು, ಇದರಿಂದ ದಿನಗೂಲಿ ನೌಕರರು ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ತಲುಪಿದೆ. ದೇಶದೆಲ್ಲೆಡೆ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಕಷ್ಟದಲ್ಲಿರುವವರಿಗೆ ಅಶಕ್ತರಿಗೆ ತಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡುತ್ತಿವೆ.
ಉಡುಪಿ ಜಿಲ್ಲೆಯಲ್ಲೂ ಅಶಕ್ತರಿಗೆ ಮತ್ತು ಅತಿ ಅಗತ್ಯವಿರುವವರಿಗೆ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ದಾನಿಗಳು ಸಹಾಯವನ್ನು ಮಾಡುತ್ತಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತಿಗೆ ವಿವಿಧ ಸಂಘ ಸಂಸ್ಥೆಗಳು ಅಕ್ಕಿ ಸಹಿತ ದಿನಸಿ ವಸ್ತುಗಳನ್ನು ಅಶಕ್ತರಿಗೆ ತಲುಪಿಸಲು ನೀಡುತ್ತಿದ್ದಾರೆ.
ಪಲಿಮಾರು ಸಂತ ಪಿಯೂಸ್ ದೇವಾಲಯದ ವತಿಯಿಂದ ಸುಮಾರು 1.80 ಲಕ್ಷ ಮೊತ್ತದ ಅಕ್ಕಿ ಸಹಿತ ದಿನಸಿ ವಸ್ತುಗಳನ್ನೊಳಗೊಂಡ 300 ಕಿಟ್ ಗಳನ್ನು ಅಶಕ್ತರಿಗೆ ಮತ್ತು ಅಗತ್ಯವಿರುವವರಿಗೆ ತಲುಪಿಸಲು ಪಲಿಮಾರು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ದೇವಾಲಯದ ಸಮಸ್ತ ಭಕ್ತರ ಪರವಾಗಿ, ಪ್ರಧಾನ ಧರ್ಮಗುರು ವಂ. ಫಾ. ಡಾ. ರೋಕ್ ಡಿಸೋಜ ದೇವಾಲಯದ ವತಿಯಿಂದ, 300 ಕಿಟ್ ಗಳನ್ನು ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಅವರಿಗೆ ದೇವಾಲಯದ ವಠಾರದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಧುಕರ ಸುವರ್ಣ, ಸತೀಶ್ ದೇವಾಡಿಗ, ಮಾಜಿ ಪಾಲನಾ ಮಂಡಳಿ ಉಪಾಧ್ಯಕ್ಷ ಡೈನಿ ಕುಟಿನ್ಹೊ, ಯೋಗೀಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಡ್ವೆ ವಿವಿಧೋದ್ದೇಶ ಸಹಕಾರಿ ಸೌಹಾರ್ದ ನಿಯಮಿತ ದಿಂದಲೂ 50 ಕಿಟ್ ಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ಚಂದ್ರ ಸುವರ್ಣ, ನಿರ್ದೇಶಕರಾದ ವಾಸುದೇವ, ಡೈನಿ ಕುಟಿನ್ಹೊ ಸಹಕಾರಿ ಸಂಘದ ಕಿಟ್ ಗಳನ್ನು ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಫುಟಾರ್ಡೋರವರಿಗೆ ಹಸ್ತಾಂತರಿಸಿದರು.
ಪಲಿಮಾರು ಗ್ರಾಮ ಪಂಚಾಯತ್ನ ಮಾಜಿ ಸದಸ್ಯ ಫ್ರಾನ್ಸಿಸ್ ಡಿಸೋಜಾ ತಮ್ಮ ವೈಯಕ್ತಿಕ ನೆಲೆಯಿಂದ ಅಕ್ಕಿ ಮತ್ತು ದಿನಸಿ ವಸ್ತುಗಳನ್ನೊಳಗೊಂಡ 50 ಕಿಟ್ ಗಳನ್ನು ಅಶಕ್ತರಿಗೆ ತಲುಪಿಸಲು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು.
Nice job