ಫಲಿಮಾರು ರಸ್ತೆ ಬಂದ್, ಇಕ್ಕೆಲಗಳ ಗ್ರಾಮಸ್ಥರ ಪರದಾಟ
ಪಡುಬಿದ್ರಿ: ಸರ್ಕಾರ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿದ ಬಳಿಕ ಕಾಪುವಿನ ನಿರಾಶ್ರಿತರ ಕೇಂದ್ರದಲ್ಲಿದ್ದ ಕಾರ್ಮಿಕರು ಊರಿಗೆ ಮರಳಬೇಕು ಎಂದು ಒತ್ತಾಯಿಸಿದ್ದು, ಅಧಿಕಾರಿಗಳು ಅವರನ್ನು ಸಂತೈಸಿದರು. ದಿ. ದೇವರಾಜ್ ಅರಸು ಬಾಲಕರ ವಸತಿ ನಿಲಯದಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿತ್ತು. ಇಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ನ 10 ಮಂದಿ ಕಾರ್ಮಿಕರು ನೆಲೆಸಿದ್ದರು. ಲಾಕ್‌ಡೌನ್ ಮುಂದುವರಿಯುವ ಬಗ್ಗೆ ಘೋಷಣೆಯಾಗುತ್ತಿದ್ದಂತೆಯೇ, ‘ನಾವು ಊರಿಗೆ ತೆರಳುತ್ತೇವೆ’ ಕೇಂದ್ರದ ಮೇಲುಸ್ತುವಾರಿ ವಹಿಸಿದ್ದ ಮೇಲ್ವಿಚಾರಕ ಗಣೇಶ್ ನಾಯಕ್ ಅವರಲ್ಲಿ ಒತ್ತಾಯಿಸಿದರು. ಬಳಿಕ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್ ಹಾಗೂ ಕಾಪು ಪೊಲೀಸರು ಬಂದು ಅವರನ್ನು ಮನವೊಲಿಸಿದರು. ಕಳೆದ ವಾರ ಮಂಗಳೂರಿನ ಮುಡಿಪು ಎಂಬಲ್ಲಿಂದ ಹಾವೇರಿಗೆ ಕಾಲ್ನಡಿಗೆಯಲ್ಲೇ ತೆರಳುತಿದ್ದಾಗ ಹೆಜಮಾಡಿಯ ಚೆಕ್‌ಪೋಸ್ಟ್‌ನಲ್ಲಿ ತಡೆದು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇವರು ಕೆಲಸಕ್ಕೆಂದು ಬಂದು ಒಂದು ತಿಂಗಳಾಗಿತ್ತು. ಅಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು. ಆ ಬಳಿಕ ಊರಿಗೆಂದು ಕಾರಿನಲ್ಲಿ ಸಂಚರಿಸಿದ್ದು, ಭಟ್ಕಳದಲ್ಲಿ ತಡೆದು ವಾಪಸ್ ಮಂಗಳೂರಿಗೆ ಕಳುಹಿಸಿದ್ದರು. ಮತ್ತೆ ಕಾಲ್ನಡಿಗೆಯಲ್ಲಿ ಊರಿಗೆ ಹೊರಟು ಇಲ್ಲಿ ದಾಖಲಾಗಿದ್ದರು. ‘ಇಲ್ಲಿ ನಮಗೆ ಉತ್ತಮ ಸೌಕರ್ಯ ಒದಗಿಸಿದ್ದಾರೆ. ಒಳ್ಳೆಯ ಊಟ, ತಿಂಡಿ ಸಮಯಕ್ಕೆ ಸಿಗುತ್ತದೆ. ಯಾವುದೇ ಸಮಸ್ಯೆ ಇಲ್ಲ. ಆದರೆ ನಾವು ಊರಿಗೆ ಹೋಗಬೇಕು ಎಂದು ಹೊರಟಿದ್ದೇವೆ. ಮತ್ತೆ ಮೇ 3ವರೆಗೆ ಲಾಕ್‌ಡೌನ್ ಇರುವುದರಿಂದ ನಮ್ಮ ಮನೆಯಲ್ಲಿ ಆತಂಕಗೊಳ್ಳುತ್ತಾರೆ’ ಎಂದು ತಂಡದಲ್ಲಿದ್ದ ರವಿ ತಿಳಿಸಿದರು. ಫಲಿಮಾರಿನಲ್ಲಿ ಸಮಸ್ಯೆ: ಉಡುಪಿ ಜಿಲ್ಲೆಯ ಗಡಿ ಫಲಿಮಾರಿನಲ್ಲಿ ರಸ್ತೆ ಸೀಲ್‌ಡೌನ್‌ನಿಂದ ಗಡಿ ಭಾಗದ ಶಾಂಭವಿ ನದಿ ಇಕ್ಕೆಲಗಳ ಗ್ರಾಮಸ್ಥರು ಅಗತ್ಯ ವಸ್ತುಗಳ ಖರೀದಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖವಾಗಿರುವ ಹಿನ್ನೆಲೆಯಲ್ಲಿ ಪಲಿಮಾರಿನ ಶಾಂಭವಿ ನದಿ ಸೇತುವೆ ಸಂಪರ್ಕ ರಸ್ತೆಯ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ಮಣ್ಣು ತುಂಬಿಸಿ ಹಾಗೂ ಸಿಮೆಂಟ್ ಬ್ಲಾಕ್ ಬಳಸಿ ಕಟ್ಟೆ ಕಟ್ಟಿ ಸೀಲ್‌ಡೌನ್ ಮಾಡಿ ಅನಗತ್ಯ ವಾಹನಗಳ ಸಂಚಾರ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪರಿಣಾಮ ಅಗತ್ಯ ವಸ್ತುಗಳಿಗಾಗಿ ಫಲಿಮಾರು ಮತ್ತು ಪಡುಬಿದ್ರಿಯನ್ನು ಆಶ್ರಯಿಸಿರುವ ಬಳ್ಕುಂಜೆ, ಕರ್ನಿರೆ ಭಾಗದ ಜನರು ಸಾಮಗ್ರಿಗಳನ್ನು ಹೊತ್ತುಕೊಂಡು ಅತ್ತಿಂದಿತ್ತ ಸಂಚರಿಸುವಂತಾಗಿದೆ. ಫಲಿಮಾರಿನಲ್ಲಿರುವ ವೈದ್ಯರ ಕ್ಲಿನಿಕ್‌ನಲ್ಲಿ ತಪಾಸಣೆಗಾಗಿ ಹಾಗೂ ಪಡಿತರ ಸಾಮಗ್ರಿ ಪಡೆಯಲು ಈ ಭಾಗದ ವಯೋವೃದ್ಧರು ಮಣ್ಣ ದಿಣ್ಣೆಯನ್ನು ಕಷ್ಟಪಟ್ಟು ಹತ್ತಿಳಿದು ಸಂಚರಿಸುವಂತಾಗಿದೆ. ಹೆದ್ದಾರಿಯಲ್ಲಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಇರುವಂತೆ ಸಿಬ್ಬಂದಿಯನ್ನು ನೇಮಿಸಿ ತಪಾಸಣೆ ನಡೆಸಿ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಲಾಕ್‌ಡೌನ್: ಕಾಮಗಾರಿ ಕೊರೊನಾ ವೈರಸ್ ಭೀತಿಯ ಮಧ್ಯೆಯೂ ಪಡುಬಿದ್ರಿ ಸೇತುವೆ ಬಳಿಯ ತಾತ್ಕಾಲಿಕ ಶೆಡ್‌ಗಳಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೆ ಉತ್ತರ ಪ್ರದೇಶ ಮೂಲದ 18 ಮಂದಿ ಕೂಲಿ ಕಾರ್ಮಿಕರು ಕಾಣಿಸಿಕೊಂಡಿದ್ದಾರೆ. ಇಲ್ಲಿನ ಕಲ್ಸಂಕ ಸೇತುವೆಯ ಕಾಮಗಾರಿ ಪೂರ್ಣಗೊಳಿಸಲು ಈ ಕಾರ್ಮಿಕರನ್ನು ಬಳಸಲಾಗುತ್ತಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. |