ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ:ಬಂಧನ
ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಆಯೋಜಿಸಿದ್ದ ಪ್ರತಿಭಟನೆ ಸಭೆ ಪ್ರಾರಂಭವಾಗುತ್ತಿದ್ದಂತೆ ವೇದಿಕೆ ಏರಿದ ಅಮೂಲ್ಯ, ಮೂರೂ ಬಾರಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಅಲ್ಲೇ ಇದ್ದ ಪೊಲೀಸರು ತಕ್ಷಣ ಅಮೂಲ್ಯ ಳನ್ನು ತಮ್ಮ ವಶಕ್ಕೆ ಪಡೆದರು.
ಪ್ರತಿಭಟನಾ ಸಭೆಯಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಅಮುಲ್ಯ ಕೂಗಿದ ಘೋಷಣೆಯಿಂದ ತಬ್ಬಿಬ್ಬಾದರು. ತಕ್ಷಣ ಯುವತಿ ಕೈಯಿಂದ ಮೈಕ್ ಎಳೆದುಕೊಂಡು, ಈ ರೀತಿ ಘೋಷಣೆ ಕೂಗಬಾರದಿತ್ತು. ನಾವು ಈ ಘೋಷಣೆಯನ್ನು ಖಂಡಿಸುತ್ತೇವೆ ಎಂದರು. ಸಂಘಟಕರು ಕೂಡಾ ಓವೈಸಿ ಮಾತಿಗೆ ಧ್ವನಿಗೂಡಿಸಿದರು.
ಈ ಘಟನೆ ಕಾರ್ಯಕ್ರಮ ಆಯೋಜಕರಲ್ಲಿ ಕೆಲ ಕಾಲ ಗೊಂದಲ ಮೂಡುವಂತೆ ಮಾಡಿತು. ಇನ್ನು ಪ್ರಸ್ತುತ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ರಹಸ್ಯ ಪ್ರದೇಶಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪಾಕ್ ಪರ ಜೈಕಾರ ಕೂಗಿದ ಅಮೂಲ್ಯಳನ್ನು ಉಪ್ಪಾರ್‌ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆಕೆಯ ವಿರುದ್ಧ ದೇಶದ್ರೋಹ ಪ್ರಕರಣದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ 124ಎ, 153(ಎ) (ಬಿ) (ಸಿ), 505(2) ಅಡಿ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ. ಅಮೂಲ್ಯಳ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಡಿಯೋ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದಾರೆ.