ಪಡುಬಿದ್ರಿ: ಮಾ12 ರಂದು ಬಂಟರ ಸಂಘದ ಸಭಾಂಗಣ ಉದ್ಘಾಟನೆ

ಪಡುಬಿದ್ರಿ: ಕರಾವಳಿಯ ಪ್ರತಿಷ್ಠಿತ ಬಂಟರ ಸಂಘದ ಪಡುಬಿದ್ರಿ ಬಂಟರ ಭವನ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಣೀಯವಾದ ಕಟ್ಟಡವಾಗಿದ್ದು, ಬಂಟ ಸಮಾಜಕ್ಕೆ ಹೆಮ್ಮೆಯ ಸಂಕೇತವಾಗಿದೆ. ಇದೀಗ ಸಂಘದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ.

ಸದ್ಗುರು ನಿತ್ಯಾನಂದ ಪರಮ ಗುರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿ ವರ್ಷ ಗುರುವಂದನಾ ಕಾರ್ಯಕ್ರಮ ನಡೆಸುವುದರೊಂದಿಗೆ ವಿವಿಧ ದಾನಿಗಳ ಸಹಕಾರದಿಂದ ಈಗಾಗಲೇ ನಿರ್ಮಾಣಗೊಂಡಿರುವ ವಿವಿಧ ಸಂಘದ ಅಭಿವೃದ್ಧಿ ಯೋಜನೆಗಳನ್ನು ಮಾ.11 ಮತ್ತು12 ರಂದು ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಉದ್ಘಾಟಿಸಲಾಗುವುದೆಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 11 ರ ಬುಧವಾರ ಸಂಜೆ 4 ಕ್ಕೆ ಸದ್ಗುರುಶ್ರೀ ನಿತ್ಯಾನಂದ ಪರಮ ಗುರುಗಳ ಮೂರ್ತಿಯನ್ನು ಪಡುಬಿದ್ರಿ ಪೇಟೆಯಿಂದ ಬಂಟರ ಸಂಘಕ್ಕೆ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುವುದು. ಸಾಯಂಕಾಲ 7 ಗಂಟೆಗೆ ವಾಸ್ತುಹೋಮ, ಬಿಂಬ ಶುದ್ಧಿ ಸಹಿತ ದೇವತಾ ಕಾರ್ಯಕ್ರಮ ಜರಗಲಿದೆ.


ಮಾ12 ರ ಗುರುವಾರ ಬೆಳಿಗ್ಗೆ 8.30 ಕ್ಕೆ ನಾಗದೇವರಿಗೆ ಪಂಚಾಮೃತಭಿಷೇಕ ಸೇವೆ ನೆರವೇರಲಿದೆ. ಬೆಳಿಗ್ಗೆ 10.05 ಕ್ಕೆ ಸರಿಯಾಗಿ ಶ್ರೀ ನಿತ್ಯಾನಂದ ಗುರುಗಳ ಪ್ರತಿಷ್ಠೆ – ಕಲಶಾಭಿಷೇಕ- ಪ್ರಸನ್ನ ಪೂಜೆ ಪ್ರಸಾದ ವಿತರಣೆ ನೆರವೇರಲಿದೆ. ಈ ಸಂದರ್ಭ ಬಂಟರ ಸಂಘದ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಲಿದೆ.
ಗುರುವಾರ 5 ಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ನಿಟ್ಟೆ ವಿನಯ್ ಹೆಗ್ಡೆ ಸಭಾಭವನ, ಬಂಟರ ಚಾವಡಿ ಸಭಾಂಗಣದ ಕೃಷ್ಣ ಸುಧಾಮ ವೇದಿಕೆ ಹಾಗೂ ಆವರಣಗೋಡೆ ಉದ್ಘಾಟನೆಗೊಳಿಸಲಿದ್ದಾರೆ.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ಹೋಟೇಲ್ ರಾಮ್‌ದೇವ್‌ನ ಮಾಲಕ ಬೋಳ ರಘರಾಮ ಕೆ ಶೆಟ್ಟಿ, ಮುಂಬಯಿ ಕೃಷ್ಣ ಪ್ಯಾಲೇಸ್‌ನ ಮಾಲಕ ಕೃಷ್ಣ ವೈ ಶೆಟ್ಟಿ, ಬೆಂಗಳೂರು ಸಿ.ಎಂ.ಡಿ. ಎಂ.ಆರ್.ಜಿ. ಗ್ರೂಪ್‌ನ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೆಂದ್ರ ಕುಮಾರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನವಿ ಮುಂಬೈಯ ಉದ್ಯಮಿ ಅಶೋಕ್ ಆರ್. ಶೆಟ್ಟಿ, ಬಂಟರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ನವಿ ಮುಂಬಯಿ ದೇವಿ ರೆಸಿಡೆನ್ಸಿ ಮಾಲಕ ಅಶೋಕ್ ಆರ್. ಶೆಟ್ಟಿ, ಎರ್ಮಾಳು ಚಂದ್ರಹಾಸ್ ಶೆಟ್ಟಿ ಪೂನಾ, ಭಾಸ್ಕರ್ ಶೆಟ್ಟಿ ಹೋಟೆಲ್ ಖಾಂದೇಶ್, ನವಿ ಮುಂಬಯಿ, ಜಯಾರಾಜ್ ಹೆಗ್ಡೆ ಸಂಚಾಲಕರು, ಮಾತೃ ಬಂಟರ ಸಂಘ ಉಡುಪಿ, ವೈ ಶಶಿಧರ್ ಕೆ ಶೆಟ್ಟಿ ಅಧ್ಯಕ್ಷರು, ಬಂಟ್ಸ್ ವೆಲ್‌ಫೇರ್ ಟ್ರಸ್ಟ್(ರಿ) ಪಡುಬಿದ್ರಿ, ಸಿರಿಮುಡಿ ದತ್ತಿನಿಧಿ ಸ್ಥಾಪಕರು, ಮಾಜಿ ಅಧ್ಯಕ್ಷರು ಪಡುಬಿದ್ರಿ ಬಂಟರ ಸಂಘ ಸಾಂತೂರು ಭಾಸ್ಕರ ಶೆಟ್ಟಿ ಉಪಸ್ತಿತರಿರುವರು.


ವಿಶೇಷ ಅಹ್ವಾನಿತರಾಗಿ ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿ’ಸೋಜ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಶಾಜಿ ಸಚಿವ ವಿನಯಕುಮಾರ್ ಸೊರಕೆ ಆಗಮಿಸಲಿದ್ದಾರೆ. ಪಡುಬಿದ್ರಿ ಬಂಟರ ಭವನ 2004ರಲ್ಲಿ ಅಂದಿನ ಸಂಘದ ಅಧ್ಯಕ್ಷರು ಲ| ಸುರೇಶ್ ಶೆಟ್ಟಿ ಗುಂಡ್ಲಾಡಿಯವರ ಮುತುವರ್ಜಿಯಿಂದ ನಿರ್ಮಾಣವಾಗಿತ್ತು. ಎರ್ಮಾಳ್ ಶಶಿಧರ ಶೆಟ್ಟಿಯವರು ಕಟ್ಟಡ ಸಮಿತಿಯ ಅಧ್ಯಕ್ಷರಾಗಿದ್ದರು. ಇದೀಗ ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಹೆಜಮಾಡಿ, ನಡ್ಸಾಲು, ಪಾದೆಬೆಟ್ಟು, ಪಡುಬಿದ್ರಿ, ಅವರಾಲು, ಫಲಿಮಾರು, ಎರ್ಮಾಳ್ ತೆಂಕ, ಎರ್ಮಾಳ್ ಬಡಾ, ಪಣಿಯೂರು, ಎಲ್ಲೂರು, ಕುಂಜೂರು, ಅದಮಾರು, ಅಡ್ವೆ, ನಂದಿಕೂರು, ಇನ್ನಾ ಗ್ರಾಮಗಳ ಗ್ರಾಮೀಣ ಭಾಗದ ಕಟ್ಟಕಡೆಯ ಬಂಟ ಸಮಾಜದ ಪ್ರತಿಯೋರ್ವರಿಗೂ ಸಂಘದಲ್ಲಿ ಸಕ್ರಿಯರಾಗಬೇಕು. ಸಮಾಜದಲ್ಲಿರುವ ವಿಧವೆಯರು, ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ಬಡ ವಿದ್ಯಾರ್ಥಿಗಳು, ಮನೆ ಇಲ್ಲದವರು, ಅನಾರೋಗ್ಯ ಪೀಡಿತರಿಗೆ ಸಹಕಾರ, ಬಡ ಹೆಣ್ಣು ಮಕ್ಕಳ ಮದುವೆಗೆ ನೆರವಾಗುವ ಉದ್ದೇಶದಿಂದ ಮತ್ತು ಸಂಘಟನಾತ್ಮಕವಾಗಿ ನಾವು ಒಂದಾಗುವ ವಿನೂತನ ಕಾರ್ಯಕ್ರಮವೇ ಗ್ರಾಮೀಣ ಬಂಟರ ಮನೆ ಕಡೆ ಹೋಗಿ ಬಂಟ ಗ್ರಾಮಸಭೆಗಳನ್ನು ನಡೆಸಲಾಗುವುದೆಂದರು.
ಸಂಘದಲ್ಲಿ ಸಕ್ರಿಯ ತಂಡವನ್ನು ರಚಿಸಿಕೊಂಡು ವಿವಿಧ ಸಮಿತಿಗಳನ್ನು ರೂಪಿಸಿಕೊಂಡು ಜವಾಬ್ದಾರಿಯನ್ನು ಸಂಘದ ಸದಸ್ಯರಿಗೆ ನೀಡಲಾಗಿದೆ.

ಸಿರಿಮುಡಿ ದತ್ತಿ ನಿಧಿ, ಮಹಿಳಾ ಸಮಿತಿ, ಯುವ ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ, ಧಾರ್ಮಿಕ ಸಮಿತಿ, ಕಾರ್ಯಕ್ರಮ ಸಂಯೋಜನ ಸಮಿತಿ, ಗ್ರಾಮ ಸಮಿತಿ, ಮಾಹಿತಿ ಕೈಪಿಡಿ ಸಮಿತಿ, ಕಲ್ಯಾಣನಿಧಿ ಸಮಿತಿ, ಸರಕಾರಿ ಸವಲತ್ತುಗಳ ಮಾಹಿತಿ ಸಮಿತಿ, ಸಂಘಟನಾ ಸಮಿತಿಗಳನ್ನು ರಚಿಸಿ ವಿವಿಧ ರಚನಾತ್ಮಕವಾದ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುವ ಮತ್ತು ಐಕ್ಯತೆಗಾಗಿ ಪ್ರತಿ ತಿಂಗಳಿನ ಮೊದಲ ಮಂಗಳವಾರ ಸತ್ಯನಾರಾಯಣ ಪೂಜೆಯೊಂದಿಗೆ ಸಂಘದ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮವಿದೆ.


ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ತನ್ನ ಸಮಾಜಕ್ಕೆ ಮತ್ತು ಸಂಘಕ್ಕೆ ಶಾಶ್ವತವಾದ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುವ ವಾಗ್ದಾನ ನೀಡಿ ಈಗ ಕೇವಲ 8 ತಿಂಗಳಲ್ಲಿ ಸಂಘದ ಹಿರಿಯ ಸಹಕಾರ ದಾನಿಗಳ ನಿರಂತರ ಸಂಪರ್ಕದಿಂದ ಸುಮಾರು ರೂ.1ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ದೊರಕಿದೆ.
ಸಮಾಜದ ಗಣ್ಯರನ್ನು ದಾನಿಗಳನ್ನು ಸಂಪರ್ಕಿಸಿ ಪಡುಬಿದ್ರಿ ಬಂಟರ ಸಮಾಜ ಮತ್ತು ಸಂಘದ ಅಭಿವೃದ್ಧಿಗೆ ವಿವಿಧ ಯೋಜನೆ ಕಾರ್ಯಗತಗೊಳಿಸಲಾಗಿದ್ದು, ಎಂ.ಆರ್.ಜೆ. ಗ್ರೂಪ್‌ನ ಸಿ.ಎಂ.ಡಿ. ಕೆ. ಪ್ರಕಾಶ್ ಶೆಟ್ಟಿಯವರು ಬಂಟರ ಭವನದ ಸಂಪೂರ್ಣ ಕಟ್ಟಡವನ್ನು ಹವಾ ನಿಯಂತ್ರಣವನ್ನಾಗಿಸಲು ರೂ.50 ಲಕ್ಷ ದೇಣಿಗೆ ನೀಡಿದ್ದು ಕೆಲಸ ಪ್ರಾರಂಭವಾಗಿದೆ. ಸದ್ಗುರು ನಿತ್ಯಾನಂದ ಪರಮ ಗುರುಗಳ ಮೂರ್ತಿ ಪ್ರತಿಷ್ಠಾಪನೆಯನ್ನು ಪೂನಾದ ಉದ್ಯಮಿ ಎರ್ಮಾಳ್ ಚಂದ್ರಹಾಸ ಶೆಟ್ಟಿಯವರು ಕೊಡುಗೆಯಾಗಿ ನೀಡಲಿದ್ದಾರೆ. ಬೆಳಗಾವಿಯ ರಾಮದೇವ್ ಹೋಟೆಲ್ ಮಾಲಕರು ಬಂಟ ಸಮಾಜದ ಹಿರಿಯರಾದ ಬೋಳ ರಘುರಾಮ ಕೆ. ಶೆಟ್ಟಿಯವರು ಬಂಟರ ಚಾವಡಿ ಸಭಾಂಗಣದ ದಾನಿಯಾಗಿದ್ದಾರೆ.

ಕೃಷ್ಣ ಪ್ಯಾಲೇಸ್‌ನ ಮಾಲಕರಾದ ಕೃಷ್ಣ ವೈ. ಶೆಟ್ಟಿಯವರು ಕೃಷ್ಣ ಸುಧಾಮ ವೇದಿಕೆಯ ದಾನಿಯಾಗಿದ್ದು, ಆವರಣಗೋಡೆ ಮತ್ತು ಹೈಮಾಸ್ಕ್ ವಿದ್ಯುತ್ ದೀಪವನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜರವರ ಅನುದಾನದಿಂದ ನಡೆಸಲಾಗಿರುತ್ತದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಡಾ| ಎಂ.ಎನ್. ರಾಜೇಂದ್ರ ಕುಮಾರ್, ಮಾತೃ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮುಂಬಯಿ ನವಿ ಮುಂಬೈಯ ಉದ್ಯಮಿ ಅಶೋಕ್ ಆರ್. ಶೆಟ್ಟಿ, ಭಾಸ್ಕರ ಶೆಟ್ಟಿ ನವಿ ಮುಂಬಯಿ, ಎರ್ಮಾಳ್ ಬಾಲಚಂದ್ರ ಶೆಟ್ಟಿ ಪೂನಾ, ನಾರಾಯಣ ಶೆಟ್ಟಿ ಪೂನಾರವರು ವಿಶೇಷ ದಾನಿಗಳಾಗಿದ್ದಾರೆ.


ಸಿರಿಮುಡಿ ದತ್ತಿನಿಧಿಯನ್ನು1 ಕೋಟಿಗೇರಿಸುವ ಗುರಿ: ಪ್ರತಿ ವರ್ಷವೂ ಬಂಟ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ನೆರವಾಗುವ ಸಿರಿಮುಡಿ ದತ್ತಿನಿಧಿಯಿಂದ ಸುಮಾರು ರೂ.15 ಲಕ್ಷವನ್ನು ನೀಡುತ್ತಾ ಬಂದಿರುತ್ತದೆ (ಇದರಲ್ಲಿ ಅಂಗವಿಕಲರು, ವಿಧವೆಯರು, ವಿದ್ಯಾರ್ಥಿಗಳು ಇತ್ಯಾದಿ) ಇದರಲ್ಲಿ ಈಗಾಗಲೇ ರೂ.75 ಲಕ್ಷ ಶಾಶ್ವತ ಡಿಪಾಸಿಟ್ ಮಾಡಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ರೂ. 1 ಕೋಟಿ ಫಿಕ್ಸ್ ಡಿಪಾಸಿಟ್ ಮಾಡುವ ಇರಾದೆಯನ್ನು ಸಿರಿಮುಡಿ ದತ್ತಿನಿಧಿಯ ಸಂಸ್ಥಾಪಕರು ಮತ್ತು ಬಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿಯವರು ತಿಳಿಸಿದ್ದಾರೆ.


ಶಿಕ್ಷಣ – ವೃದ್ಧಾಶ್ರಮದ ಯೋಜನೆ : ಸಮಾಜಕ್ಕೆ ಉತ್ತಮ ಶಿಕ್ಷಣಕ್ಕೆ ಒತ್ತು ನೀಡುವ ಸಂಕಲ್ಪದೊಂದಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಒಪಿಸುವ ಉದ್ದೇಶ ನಮ್ಮದಾಗಿದ್ದು, ಈ ಬಗ್ಗೆ ದಾನಿಗಳನ್ನು ಸಂಪರ್ಕಿಸಲಾಗಿದೆ. ಸೂಕ್ತ ಸ್ಥಳವನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಲವೊಂದು ಮಹಾದಾನಿಗಳು ಬಂಟ ವೃದ್ಧಾಶ್ರಮ ಯೋಜನೆಯನ್ನು ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೂಡಾ ಚಿಂತಿಸಲಾಗುವುದೆಂದು ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ.


ಅಭಿವೃದ್ಧಿಗೆ ಇನ್ನೊಂದು ಹೆಸರು : ಡಾ| ದೇವಿಪ್ರಸಾದ್ ಶೆಟ್ಟಿ
ಬಂಟರ ಪ್ರತಿಷ್ಠಿತ ಐಕಳಬಾವ ಮನೆತನದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ವ್ಯಕ್ತಿತ್ವವೇ ವಿಶೇಷವಾದದ್ದು. ಕಾಲೇಜು ದಿನಗಳಿಂದಲೇ ನಾಯಕತ್ವ ಗುಣ. ಸ್ನೇಹಮಯಿ ವ್ಯಕ್ತಿತ್ವ, ಅತ್ಯತ್ತಮ ಸಂಘಟಕ, ಅಭಿವೃದ್ಧಿಗೆ ಇನ್ನೊಂದು ಹೆಸರು ದೇವಿಪ್ರಸಾದ್ ಶೆಟ್ಟಿ. ಬಡವರ ಕಷ್ಟಗಳಿಗೆ ಸ್ಪಂದಿಸುವ ಆಶ್ರಯದಾತ. ಇವರು ಜಿಲ್ಲೆಯಲ್ಲಿ ಅಧ್ಯಕ್ಷರೆಂದೇ ಖ್ಯಾತರಾದವರು. ಬೆಳಪು ಗ್ರಾಮವನ್ನು ರಾಷ್ಟ್ರಕ್ಕೆ ಮಾದರಿಯಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಅವರದ್ದು. ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದವರು. ಸಹಕಾರಿ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು. ಬೆಳಪು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರು. ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು. ಹಲವಾರು ಸಹಕಾರಿ ಕ್ಷೇತ್ರಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಟರ ಸಂಘದಲ್ಲಿ ಅಷ್ಟಕ್ಕಷ್ಟೆ ಗುರುತಿಸಲ್ಪಡುತ್ತಿದ್ದ ಅವರು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳುಗಳಲ್ಲಿ ಯೋಚಿಸಲಾದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅಲ್ಲಿಯೂ ಸೈ ಎನಿಸಿದ್ದಾರೆ.


ಪ್ರಕಟಣೆಯಲ್ಲಿ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಕೆ. ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿಶೆಟ್ಟಿ ಗುಂಡ್ಲಾಡಿಯವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!