ಮೇ ಅಂತ್ಯಕ್ಕೆ ದೇಶದಲ್ಲಿ 4 ಕೋಟಿ ಮೊಬೈಲ್ ನಂಬರ್‌ಗಳು ಸ್ಥಗಿತ?
ಮೇ ಅಂತ್ಯದ ಹೊತ್ತಿಗೆ ದೇಶದಲ್ಲಿ ಅಂದಾಜು 4 ಕೋಟಿ ಮೊಬೈಲ್ ನಂಬರ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಹ್ಯಾಂಡ್‌ಸೆಟ್‌ಗಳು ಮತ್ತು ಅದರ ಬಿಡಿಭಾಗಗಳ ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ನಾಲ್ಕು ಕೋಟಿಗೂ ಅಧಿಕ ಮೊಬೈಲ್‌ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆಗಳಿವೆ.
‘ಸದ್ಯ ಮೊಬೈಲ್ ಫೋನ್ ಮತ್ತು ಬಿಡಿಭಾಗಗಳ ಪೂರೈಕೆ ನಿಂತಿದೆ. ಹೀಗಾಗಿ ಕೆಟ್ಟು ಹೋಗಿರುವ ಮೊಬೈಲ್ ಫೋನ್‌ಗಳು ಬಿಡಿಭಾಗಗಳ ಲಭ್ಯತೆ ಇಲ್ಲದೇ ರಿಪೇರಿಯಾಗದೆ ಕುಳಿತಿವೆ. ಸದ್ಯ ದೇಶದಲ್ಲಿ 2.5 ಕೋಟಿಯಷ್ಟು ಮೊಬೈಲ್ ಫೋನ್‌ಗಳು ನಿಷ್ಕ್ರಿಯಗೊಂಡಿವೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಹೊಸ ಮೊಬೈಲ್‌ಗಳ ಲಭ್ಯತೆಯೂ ಇಲ್ಲವಾಗಿದೆ,’ ಎಂದು ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ ಸಂಘ (ಐಸಿಇಎ) ತಿಳಿಸಿದೆ.
ಟೆಲಿಕಾಂ, ಇಂಟರ್ನೆಟ್, ಪ್ರಸಾರ ಮತ್ತು ಐಟಿ ಸೇವೆಗಳಿಗೆ ಸರ್ಕಾರವೇನೋ ಅನುಮತಿ ನೀಡಿದೆ. ಆದರೆ ಮೊಬೈಲ್ ಸಾಧನಗಳ ಪೂರೈಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಎಲ್ಲ ಸೇವೆಗಳನ್ನು ಪಡೆಯಲು ಮೊಬೈಲ್ ಸಾಧನಗಳ ಪೂರೈಕೆಯೇ ಪ್ರಧಾನ. ಆ್ಯಪಲ್, ಫಾಕ್ಸ್‌ಕಾನ್ ಮತ್ತು ಶಿಯೋಮಿಯಂಥ ಕಂಪನಿಗಳು ತಿಂಗಳಿಗೆ ಸರಾಸರಿ 2.5 ಕೋಟಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತವೆ. ದೇಶದಲ್ಲಿ ಒಟ್ಟಾರೆ 85 ಕೋಟಿ ಫೋನ್ ಬಳಕೆದಾರರಿದ್ದಾರೆ ಎಂದು ಹೇಳಲಾಗಿದೆ.
ಲಾಕ್‌ಡೌನ್ ಜಾರಿ ನಂತರ ದೇಶದಲ್ಲಿ ಅಗತ್ಯ ಸೇವೆಗಳಿಗೆ ಮತ್ತು ಅಗತ್ಯ ವಸ್ತುಗಳ ಪೂರೈಕೆ, ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿರ್ಬಂಧವು 5ನೇ ವಾರಕ್ಕೆ ಕಾಲಿಟ್ಟಿದೆ.
ಕೊರೊನಾ ವೈರಸ್‌ನ ಉಗಮ ಸ್ಥಾನ ಚೀನಾದಲ್ಲಿ ಸೋಂಕಿನಿಂದಾಗಿ ಈ ವರೆಗೆ ಮೃತಪಟ್ಟವರ ಸಂಖ್ಯೆ 4,637 ಮಾತ್ರ. ಆದರೆ, ಚೀನಾ ನೈಜ ಅಂಕಿ ಸಂಖ್ಯೆಗಳನ್ನು ಮರೆ ಮಾಚುತ್ತಿದೆ ಎಂಬ ಆರೋಪಗಳು ಜಾಗತಿಕವಾಗಿ ಕೇಳಿ ಬಂದಿದ್ದವು. ಅಲ್ಲದೆ, ಅಲ್ಲಿ ನಿಷ್ಕ್ರಿಯಗೊಂಡಿರುವ ಮೊಬೈಲ್ ಸಂಖ್ಯೆಗಳಿಗೂ ಸಾವಿನ ಸಂಖ್ಯೆಗಳಿಗೂ ಸಂಬಂಧವಿದೆ ಎಂದು ಹೇಳಲಾಗುತ್ತಿತ್ತು.
ಚೀನಾದ ಅತಿದೊಡ್ಡ ಮೊಬೈಲ್ ಕಂಪನಿ ‘ಚೀನಾ ಮೊಬೈಲ್’ 82 ಲಕ್ಷ ಗ್ರಾಹಕರನ್ನು ಜನವರಿ ಹಾಗೂ ಫೆಬ್ರುವರಿಯಲ್ಲಿ ಕಳೆದುಕೊಂಡಿತ್ತು. ಎರಡನೇ ಅತಿದೊಡ್ಡ ಕಂಪನಿ ‘ಚೀನಾ ಟೆಲಿಕಾಂ ಕಂಪನಿ’ಯೂ ಇದೇ ಅವಧಿಯಲ್ಲಿ 56 ಲಕ್ಷ ಗ್ರಾಹಕರನ್ನು ಕಳೆದುಕೊಂಡಿತ್ತು. ‘ಚೀನಾ ಯೂನಿಕಾಂ ಕಂಪನಿ’ಯ 78 ಲಕ್ಷ ಗ್ರಾಹಕರ ಮೊಬೈಲ್‌ಗಳೂ ಏಕಾಏಕಿ ನಿಂತು ಹೋಗಿದ್ದವು. ಒಟ್ಟಾರೆ 2.15 ಕೋಟಿ ಜನರ ಮೊಬೈಲ್‌ಗಳು ನಿಷ್ಕ್ರಿಯವಾಗಿದ್ದವು. ಇವೆಲ್ಲವೂ ಸಾವಿಗೀಡಾದವರ ಸಂಖ್ಯೆ ಎಂದು ಹೇಳಲಾಯಿತು.