ರಾಜ್ಯದಲ್ಲಿ 5ಕ್ಕೇರಿತು ಮೃತರ ಸಂಖ್ಯೆ, 181 ಮಂದಿಯಲ್ಲಿ ಕೊರೊನಾ ಸೋಂಕು ದೃಢ
ಬೆಂಗಳೂರು: ರಾಜ್ಯದಲ್ಲಿ ಒಟ್ಟು 181 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಮೃತರ ಸಂಖ್ಯೆ ಐದಕ್ಕೇರಿದೆ. 28 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕಲಬುರ್ಗಿಯಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19ಕ್ಕೆ ಬಲಿಯಾಗಿದ್ದಾರೆ. ಮೃತರ ತಾಯಿಗೂ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ. ಈವರೆಗೆ ಕಲಬುರ್ಗಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿಗೂ ಕೋವಿಡ್-19 ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ. ತಬ್ಲಿಗಿ ಜಮಾತ್ ಧರ್ಮಸಭೆಗೆ ತೆರಳಿದ್ದ ಜಿಲ್ಲೆಯ 7 ಮಂದಿಯನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.
ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ವಕ್ಫ್ ಮಂಡಳಿಯು ಮಸೀದಿಗಳಲ್ಲಿ ಸಮೂಹ ಪ್ರಾರ್ಥನೆ ಮತ್ತು ಕಬ್ರಸ್ತಾನ್ (ಮುಸ್ಲಿಂ ಸ್ಮಶಾನ) ಭೇಟಿಗೆ ಅವಕಾಶಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ. ಗುರುವಾರ ಆಚರಿಸುವ ಶಾಬ್-ಎ-ಬರಾತ್ ವೇಳೆ ಸಾರ್ವಜನಿಕ ಭೇಟಿ ಸಲ್ಲದು ಎಂದು ಸೂಚಿಸಿದೆ.
ಕೋವಿಡ್-19 ಕುರಿತು ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ 97456 97456 ಸಂಪರ್ಕಿಸಿ.