ಬೆಳಗಾವಿ ಸಂತ್ರಸ್ತರಿಗೆ ಹೆಚ್ಚುವರಿ 40 ಸಾವಿರ ಆಹಾರ ಕಿಟ್ ವಿತರಿಸಲು ಆದೇಶ

ಬೆಂಗಳೂರು: ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಾನಿಗೆ ಒಳಗಾಗಿರುವ ಸಂತ್ರಸ್ತ ಕುಟುಂಬಗಳ ಆಹಾರ ಭದ್ರತೆಗಾಗಿ ಹೆಚ್ಚುವರಿ ವಿಶೇಷ ಆಹಾರ ಪ್ಯಾಕೇಟ್‍ ಗಳನ್ನು ವಿತರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ಪ್ಯಾಕೇಟ್‍ಗಳಲ್ಲಿ 10 ಕೆ.ಜಿ. ಅಕ್ಕಿ, 1 ಲೀಟರ್ ತಾಳೆಎಣ್ಣೆ, 1 ಕೆಜಿ ಆಯೋಡಿನ್‍ಯುಕ್ತ ಉಪ್ಪು, 1 ಕೆಜಿ ತೊಗರಿ ಬೇಳೆ, 1 ಕೆ.ಜಿ.ಸಕ್ಕರೆ, 5 ಲೀಟರ್ ಸೀಮೆಎಣ್ಣೆ  ಒಳಗೊಂಡಿದ್ದು, ಒಟ್ಟು 40 ಸಾವಿರ ಕಿಟ್‍ಗಳನ್ನು ಉಚಿತವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ. ಬೆಳಗಾವಿಗೆ 35,000 ಹಾಗೂ ಉತ್ತರ ಕನ್ನಡ ಜಿಲ್ಲೆಗೆ 5,000 ಕಿಟ್ ಸಿಗಲಿದೆ.

ಪ್ರತಿ ಆಹಾರ ಪ್ಯಾಕೆಟ್‍ಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿರುವ 10 ಕೆ.ಜಿ. ಅಕ್ಕಿ, 1 ಕೆ.ಜಿ.ಅಯೋಡಿನ್‍ಯುಕ್ತ ಉಪ್ಪು, 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ.ಸಕ್ಕರೆ ಒಳಗೊಂಡಿರಬೇಕು. ಒಂದು ಲೀಟರ್ ತಾಳೆ ಎಣ್ಣೆಯ ಪ್ರತ್ಯೇಕ ಪ್ಯಾಕ್ ಮತ್ತು ಸೀಮೆಎಣ್ಣೆಯನ್ನು ಪ್ರತ್ಯೇಕವಾಗಿ 5 ಲೀಟರ್ ಕ್ಯಾನ್‍ನಲ್ಲಿ ಫಲಾನುಭವಿಗಳಿಗೆ ವಿತರಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ಪ್ಯಾಕೇಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ಅವರು ವಾಸಿಸುವ ಗ್ರಾಮ ಪಂಚಾಯತ್‍ಗಳಿಂದ ಮತ್ತು ನಗರ ಪ್ರದೇಶಗಳಾದಲ್ಲಿ ಪುರಸಭೆ, ಪಟ್ಟಣ ಪಂಚಾಯತ್‍ಗೆ ಜಿಲ್ಲಾಧಿಕಾರಿಗಳು ಅನುಮೋದಿಸುವ ಕೋರಿಕೆಯಂತೆ ವಿತರಿಸಬೇಕು.

ಜಿಲ್ಲಾವಾರು ನಿಗದಿಪಡಿಸಲಾಗಿರುವ ಪ್ಯಾಕೇಟ್‍ಗಳನ್ನು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರಿಂದ ಅರ್ಹ ಫಲಾನುಭವಿಗಳಿಗೆ ವಿತರಿಸಿ, ವಿತರಣೆ ಕುರಿತು ದಾಖಲೆಯನ್ನು ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಶೇಷ ಆಹಾರ ಪ್ಯಾಕೆಟ್‍ಗಳನ್ನು ಸಿದ್ಧಪಡಿಸಲು ಅಗತ್ಯ ಸಾಮಗ್ರಿಗಳ ಸಂಗ್ರಹಣೆ, ಪ್ಯಾಕಿಂಗ್ ವ್ಯವಸ್ಥೆ, ಸಾಗಾಣಿಕೆ ಇತ್ಯಾದಿ ಎಲ್ಲಾ ಜವಾಬ್ದಾರಿಗಳನ್ನು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

ವಿಶೇಷ ಆಹಾರ ಪ್ಯಾಕೆಟ್‍ಗಳಿಗೆ ಅಗತ್ಯವಿರುವ ಅಕ್ಕಿಯ ಪ್ರಮಾಣಕ್ಕಾಗಿ ಬೇಡಿಕೆಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ ಭಾರತೀಯ ಆಹಾರ ನಿಗಮದ ಒಎಂಎಸ್ಎಸ್ ದರದಲ್ಲಿ ಹಂಚಿಕೆ ಪಡೆಯಬೇಕು. ಸೀಮೆಎಣ್ಣೆಗಾಗಿ ಕೂಡ ತೈಲ ಕಂಪನಿಗಳ ಸಹಾಯಧನ ರಹಿತ ದರದಲ್ಲಿ ಪಡೆಯಲು ಆಯುಕ್ತರಿಗೆ ಬೇಡಿಕೆ ಸಲ್ಲಿಸಿ ಹಂಚಿಕೆ ಪಡೆದುಕೊಳ್ಳಬೇಕು. ಉಳಿದ ಪದಾರ್ಥಗಳಾದ ಬೇಳೆ, ತಾಳೆಎಣ್ಣೆ, ಉಪ್ಪು ಮತ್ತು ಸಕ್ಕರೆಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕು ಎಂದು ತಿಳಿಸಲಾಗಿದೆ.

ಈ ಯೋಜನೆಗೆ ತಗಲುವ ವೆಚ್ಚವನ್ನು ಕಂದಾಯ ಇಲಾಖೆಯ ಪ್ರಕೃತಿ ವಿಕೋಪ ನಿಧಿ ಲೆಕ್ಕ ಶೀರ್ಷಿಕೆಯಡಿ ಭರಿಸಬೇಕು. ಅಗತ್ಯ ಸಾಮಗ್ರಿಗಳ ಸಂಗ್ರಹಣಾ ಪ್ಯಾಕಿಂಗ್ ವ್ಯವಸ್ಥೆ, ಸಾಗಾಣಿಕೆ ಇತ್ಯಾದಿಗಳ ವೆಚ್ಚ ನಿರ್ವಹಣೆಯನ್ನು ಕರ್ನಾಟಕ ಪಾರದರ್ಶಕ ಕಾಯ್ದೆಯ ಕಲಂ 4ರಂತೆ ನಿರ್ವಹಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ವೆಂಕಟೇಶ್ ಆದೇಶದಲ್ಲಿ ತಿಳಿಸಿದ್ದಾರೆ.

ವಿಶೇಷ ಆಹಾರ ಪ್ಯಾಕೇಟ್‍ಗಳನ್ನು ರಾಜ್ಯದ 9 ಜಿಲ್ಲೆಗಳಿಗೆ 1,50,000 ಕಿಟ್‍ಗಳನ್ನು ಉಚಿತವಾಗಿ ವಿತರಿಸಲು ಸರ್ಕಾರ ಈ ಹಿಂದೆಯೇ ಆದೇಶಿಸಿದೆ. ಅದರಂತೆ ಈಗಾಗಲೇ ಬೆಳಗಾವಿ ಜಿಲ್ಲೆಗೆ 50 ಸಾವಿರ ಮತ್ತು ಉತ್ತರ ಕನ್ನಡ ಜಿಲ್ಲೆಗೆ 5000 ಕಿಟ್‍ಗಳನ್ನು ವಿತರಿಸಲಾಗಿದೆ. ಆದರೆ ಮಳೆಯಿಂದ ಸಂತ್ರಸ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಬೆಳಗಾವಿ ಜಿಲ್ಲೆಗೆ ಮತ್ತೆ 35000 ಹಾಗೂ ಉತ್ತರ ಕನ್ನಡ ಜಿಲ್ಲೆಗೆ 5000 ಹೆಚ್ಚುವರಿ ಕಿಟ್‍ಗಳನ್ನು ವಿತರಿಸಲು ಈ ಆದೇಶದ ಮೂಲಕ ಅನುಮತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!