ತ್ರಿವಳಿ ತಲಾಖ್ ಮಸೂದೆ ಮಂಡನೆ – ಸರ್ಕಾರದ ತಿದ್ದುಪಡಿ ಮಸೂದೆಗೆ ಮತ್ತೆ ವಿಪಕ್ಷಗಳು ವಿರೋಧ
ನವ ದೆಹಲಿ : ದೇಶದಲ್ಲಿ ಸಾಕಷ್ಟು ಚರ್ಚೆಯಾಗಿದ್ದ ತ್ರಿವಳಿ ತಲಾಖ್ ನಿಷೇಧ ಕಾಯ್ದೆಯ ಮಸೂದೆಯನ್ನು ಲೋಕ ಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ಸರ್ಕಾರದ ತಿದ್ದುಪಡಿ ಮಸೂದೆಗೆ ಮತ್ತೆ ವಿಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿವೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ಈ ವೇಳೆ ಪ್ರಜೆಗಳು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ಕಾನೂನು ರಚನೆ ಮಾಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕಾನೂನಿನಿಂದ ತ್ರವಳಿ ತಲಾಖ್ ಸಂತ್ರಸ್ಥರಿಗೆ ನ್ಯಾಯ ದೊರಕುತ್ತದೆ. ಈ ಮಸೂದೆಯ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ ಎಂದು ಹೇಳಿದರು.
ಇನ್ನು ಕೇಂದ್ರ ಸರ್ಕಾರದ ಈ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ತ್ರಿವಳಿ ತಲಾಖ್ ಮೂಲಕ ಎನ್ ಡಿಎ ಸರ್ಕಾರ ಜನತೆಗೆ ಅನ್ಯಾಯ ಮಾಡುತ್ತಿದ್ದು, ಈ ನಿಯಮವನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿವೆ. ಇದೇ ವಿಚಾರವಾಗಿ ಲೋಕಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಯಾವುದೇ ಲಿಖಿತ ದಾಖಲೆಗಳಿಲ್ಲದೆ ವಿಚ್ಛೇದನ ನೀಡುವ ಈ ಪದ್ಧತಿಯನ್ನು ೨೦೧೮ ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನಲ್ಲಿ ಅಪರಾಧ ಮತ್ತು ಅಸಾಂವಿಧಾನಿಕ ಎನ್ನಲಾಗಿತ್ತು. ನಂತರ ಈ ಕುರಿತು ಕಾನೂನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಲೋಕಸಭೆಯಲ್ಲಿ ಈ ಮಂಡನೆಗೆ ಅಂಗೀಕಾರ ದೊರೆತಿತ್ತಾದರೂ ರಾಜ್ಯ ಸಭೆಯಲ್ಲಿ ದೊರೆತಿರಲಿಲ್ಲ.