ದೇಶ ಒಡೆಯಲು ಮಾತ್ರ ಗೊತ್ತು, ಮುನ್ನಡೆಸಲು ಬರುವುದಿಲ್ಲ: ಯಾಸಿನ್ ಮಲ್ಪೆ

ಉಡುಪಿ: ದೇಶದಲ್ಲಿ ಆಡಳಿತ ನಡೆಸುವ ಸರಕಾರಕ್ಕೆ ದೇಶವನ್ನು ಒಡೆಯಲು ಮಾತ್ರ ಗೊತ್ತು,ಇವರಿಗೆ ದೇಶ ಮುನ್ನಡೆಸಲು ಬರುವುದಿಲ್ಲವೆಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಂಜಿನ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.


ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಾಸಿನ್ ಮಲ್ಪೆ
ಆಡಳಿತ ಪಕ್ಷ ದೇಶಕ್ಕೆ ಬೆಂಕಿ ಕೊಡುಲು ಹೊರಟಿದೆ, ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶವನ್ನು ಒಂದಾಗಿಸುವ ಪ್ರಯತ್ನ ಮಾಡಿದರೆ ಈ ಸರಕಾರ ಧರ್ಮ ಧರ್ಮಗಳ ನಡುವೆ ಕಂದಕ ಉಂಟುಮಾಡತ್ತಿದೆ. ಸಿಎಎ, ಎನ್‌ಆರ್‌ಸಿ ಮುಸ್ಲಿಮರ ವಿರೋಧಿ ಮಾತ್ರವಲ್ಲ; ದಲಿತರ, ಆದಿವಾಸಿಗಳ, ಬಡವರ ವಿರೋಧಿ. ದಶಕಗಳಿಂದ ಬದುಕು ಕಟ್ಟಿಕೊಂಡವರನ್ನು ನಿರ್ವಸತಿಗರನ್ನಾಗಿ ಮಾಡುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.

ಚಿಂತಕ ಜಿ.ರಾಜಶೇಖರ್ ಮಾತನಾಡಿ, ಅಂಬೇಡ್ಕರ್ ಸ್ಮರಣೆ ಎಂದರೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಎಂದರ್ಥ. ಇದಕ್ಕೆ ವಿರುದ್ಧವಾಗಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ನೋಂದಣಿ ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಮುಸ್ಲಿಮೇತರರಿಗೆ ಮಾತ್ರ ಕಾಯ್ದೆಯಡಿ ಪೌರತ್ವ ನೀಡಿದರೆ, ಶ್ರೀಲಂಕಾ ಯುದ್ಧ ದೌರ್ಜನ್ಯಕ್ಕೆ ಸಿಲುಕಿ ಭಾರತಕ್ಕೆ ವಲಸೆ ಬಂದ ಮುಸ್ಲಿಮರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.

ಮುಖಂಡ ಅಮೃತ್ ಶೆಣೈ ಮಾತನಾಡಿ, ಯುವಜನರ ಮನಸ್ಸಿನಿಂದ ಅಂಬೇಡ್ಕರ್, ಗಾಂಧಿ, ನೆಹರೂ ಅವರಂಥ ಮಹನೀಯರನ್ನು ಮರೆಯಾಗಿಸಿ, ಗೋಡ್ಸೆ, ಸಾವರ್ಕರ್ ಅವರಂಥ ಹೇಡಿಗಳ ಪ್ರತಿಮೆಗಳನ್ನು ಬಿಜೆಪಿ ಪ್ರತಿಷ್ಠಾಪಿಸುತ್ತಿದೆ ಎಂದು ಟೀಕಿಸಿದರು.

ಸಿಎಎ ಮುಸ್ಲಿಮರ ವಿರೋಧಿ ಮಾತ್ರವಲ್ಲ, ಬಡವರ ಹಾಗೂ ದಶಕಗಳಿಂದ ದೇಶದಲ್ಲಿದ್ದರೂ ದಾಖಲೆಗಳಿಲ್ಲದವರ ವಿರೋಧಿಯಾಗಿದೆ. ದೇಶವನ್ನು ಪ್ರೀತಿಸುವವರು, ಅಂಬೇಡ್ಕರ್ ಅವರನ್ನು ಗೌರವಿಸುವವರು ಇದೇ ೩೦ರಂದು ನಡೆಯುವ ಸಿಎಎ ವಿರೋಧಿ ಸಮಾವೇಶಕ್ಕೆ ಬೆಂಬಲ ನೀಡಬೇಕು ಎಂದರು.

ಪತ್ರಕರ್ತ ಶಶಿಧರ್ ಹೆಮ್ಮಾಡಿ ಮಾತನಾಡಿ, ?ರೈಲು ನಿಲ್ದಾಣವೇ ಇಲ್ಲದ ಕಡೆ ಚಹಾ ಮಾರಿದವರು, ಸಹಪಾಠಿಗಳೇ ಇಲ್ಲದ ಕಾಲೇಜಿನಿಂದ ಪದವಿ ಪಡೆದ ಪ್ರಧಾನಿ ದೇಶದ ಜನರ ಬಳಿ ಪೌರತ್ವ ಸಾಬೀತು ಪಡಿಸುವಂತೆ ದಾಖಲೆಗಳನ್ನು ಕೇಳುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಚುನಾವಣೆಯಲ್ಲಿ ಮತದಾರರ ಗುರುತಿನ ಪತ್ರ ತೋರಿಸಿ ಮತದಾರರು ಮತ ಹಾಕಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಪೌರತ್ವ ಸಾಬೀತಿಗೆ ವೋಟರ್ ಐಡಿ ಅಧಿಕೃತವಲ್ಲ ಎಂದಾದರೆ, ಅಧಿಕಾರ ತ್ಯಜಿಸಿ ಎಂದು ಸವಾಲು ಹಾಕಿದರು.

ದೇಶ ಸಂಕಷ್ಟದ ಕಾಲಘಟ್ಟದಲ್ಲಿದೆ. ಭಾರತೀಯರಿಗೆ ಪೌರತ್ವವನ್ನು ಸಾಬೀತು ಮಾಡಬೇಕಾದ ದುಃಸ್ಥಿತಿ ಬಂದಿದೆ. ಪ್ರತಿ ಮನೆಮನೆಗೂ ತೆರಳಿ ಸಿಎಎ, ಎನ್‌ಆರ್‌ಸಿಯಿಂದ ಆಗುವ ತೊಂದರೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಮುಖಂಡರಾದ ರಮೇಶ್ ಕಾಂಚನ್, ಫಾದರ್ ವಿಲಿಯಂ ಮಾರ್ಟಿಸ್,ಸುಂದರದ ಮಾಸ್ತರ್, ಸುನಿಲ್ ಬಂಗೇರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!