‘ಮತ್ಸ್ಯದರ್ಶಿನಿ’ಯಲ್ಲಿ ಕೇವಲ ₹ 110 ಅಂಜಲ್ ಫ್ರೈ: ಕೋಟ ಶ್ರೀನಿವಾಸ
ಉಡುಪಿ: ಕರಾವಳಿಯ ಮೀನುಗಾರಿಕೆಗೆ ಪೂರಕವಾಗಿ ಸಮಗ್ರ ಮೀನು
ಗಾರಿಕಾ ನೀತಿಯನ್ನು ಸರ್ಕಾರ ಸಿದ್ಧಪಡಿಸಿದ್ದು, ಬಜೆಟ್‌ನಲ್ಲಿ ಪ್ರಕಟಿಸಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶ್ಯಾಮಿಲಿ ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ತಾಲ್ಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ 10ನೇ ವಾರ್ಷಿಕೋತ್ಸವ, ಮೀನುಗಾರರ ಸಮಾವೇಶ ಹಾಗೂ ಸನ್ಮಾನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮತ್ಸ್ಯದರ್ಶಿನಿ ಆರಂಭ’
ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ‘ಮತ್ಸ್ಯದರ್ಶಿನಿ’ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದೊಡ್ಡ ಹೋಟೆಲ್‌ಗಳಲ್ಲಿ ₹ 500, ₹ 1,000ಕ್ಕೆ ಸಿಗುವ ಮೀನಿನ ಖಾದ್ಯಗಳು ಮತ್ಸ್ಯದರ್ಶಿನಿಯಲ್ಲಿ ಕೇವಲ ₹ 110ಕ್ಕೆ ಅಂಜಲ್,ಪಾಪ್ಲೆಟ್, ಕಾಣೆ ಫ್ರೈ ದೊರೆಯಲಿದೆ, ಇದನ್ನು ಸ್ಥಳೀಯ ಮೀನುಗಾರರೇ ನಡೆಸಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನೆರೆ ರಾಜ್ಯಗಳ ಮೀನುಗಾರಿಕಾ ನೀತಿ ಅಧ್ಯಯನ ಮಾಡಲಾಗಿದ್ದು, ಕರಾವಳಿಗೆ ಹೊಂದುವಂತಹ ಸಮಗ್ರ ಮೀನುಗಾರಿಕಾ ನೀತಿಯನ್ನು ಸಿದ್ಧಪಡಿಸಿದ್ದು, ಶೀಘ್ರವೇ ಜಾರಿಗೆ ಬರಲಿದೆ ಎಂದರು. ಕೆಎಫ್‌ಡಿಸಿಯಿಂದ ದಕ್ಷಿಣ ಕನ್ನಡ, ಉಡುಪಿಯಲ್ಲಿ ತಳ್ಳು ಮೀನು ಮಾರಾಟ ಅಂಗಡಿಗಳನ್ನು ತೆರೆಯುವುದಿಲ್ಲ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಮೂರು ಲಕ್ಷದವರೆಗೂ ಸಾಲ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಮೀನುಗಾರರ ಸಾಲ ಮನ್ನಾ ಮಾಡಿದೆ. ಆದರೆ, ಬ್ಯಾಂಕ್‌ನಿಂದ ಮೀನುಗಾರರಿಗೆ ತೊಂದರೆ ಗಳಾಗುತ್ತಿರುವ ದೂರುಗಳು ಬಂದಿದ್ದು, ಸಾಲ ವಸೂಲಿಗೆ ಒತ್ತಾಯ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಉದ್ಯಮಿ ಜಿ. ಶಂಕರ್ ಮಾತನಾಡಿ, ಕರಾವಳಿಯ ಮತ್ಸ್ಯೋದಮ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ತುಂಬಲಾರದ ನಷ್ಟ ಸಂಭವಿಸಿದೆ. ರಾಜ್ಯ ಸರ್ಕಾರ ಕೂಡಲೇ ಮಹಿಳಾ ಮೀನುಗಾರರ ಸಾಲ ಮನ್ನಾ ಹಣವನ್ನು ಅವರ ಖಾತೆಗೆ ಸಾಲದ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು. ಮಲ್ಪೆ, ಗಂಗೊಳ್ಳಿ, ಕಾರವಾರ ಸೇರಿದಂತೆ ಸಮಗ್ರ ಕರಾವಳಿಯ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜತೆಗೆ, ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಕರಾವಳಿಯ ಮತದಾರರು ಶಕ್ತಿ ತುಂಬಿದ್ದಾರೆ. ಇದಕ್ಕೆ ಪ್ರತಿಯಾಗಿ ಮೀನುಗಾರರ ಸಮಸ್ಯೆಗೆ ಸ್ಪಂದಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ಬರುವ ವಿಶ್ವಾಸವಿದೆ ಎಂದರು.ಮಹಿಳಾ ಮೀನುಗಾರರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ಆದರೆ, ಹಣ ಬಿಡುಗಡೆ ವಿಳಂಬವಾಗಿದ್ದು, ಶೀಘ್ರ ಸಾಲದ ಖಾತೆಗೆ ಹಣ ಜಮೆಯಾಗಲಿದೆ. ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣದಲ್ಲಿ ಕೇಂದ್ರದಿಂದ ಗರಿಷ್ಠ ಹಾಗೂ ವಿಶೇಷ ಪರಿಹಾರ ಕೊಡಿಸುವ ಪ್ರಯತ್ನಗಳು ನಡೆದಿದ್ದು, ಇದೇ ತಿಂಗಳ 10ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಾಗುವುದು. ಸುವರ್ಣ ತ್ರಿಭುಜ ಬೋಟ್‌ಗೆ ಐಎನ್‌ಎಸ್ ಕೊಚ್ಚಿನ್ ಹಡಗು ಡಿಕ್ಕಿ ಹೊಡೆದಿರುವ ಸಂಶಯದ ಕುರಿತು ತನಿಖೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ 10 ಮೀನುಗಾರ ಮಹಿಳೆಯರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ದಕ್ಷಿಣ ಕನ್ನಡ, ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಜಿ. ಸುವರ್ಣ, ಸಾಧು ಸಾಲ್ಯಾನ್, ಶಿವರಾಮ್, ರತ್ನ ಮೊಗವೀರ ಅವರೂ ಇದ್ದರು.ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರ್ವಹಿಸಿದರು.