ಗೊಂದಲಕ್ಕೀಡು ಮಾಡಿರುವ ಆನ್ಲೈನ್ ಕ್ಲಾಸ್

ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿಹೋಗಿದೆ.ದೇಶ ಲಾಕ್ಡೌನ್ನಲ್ಲಿದೆ. ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲರೂ ಸಮಸ್ಯೆಯಲ್ಲಿ ಇರುವವರೆ.ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರೆ.ಎಷ್ಟೋ ಮನೆಗಳಲ್ಲಿ ಊಟಕ್ಕೂ ಸಮಸ್ಯೆ ಇದೆ.ಮಾನಸಿಕ ಒತ್ತಡಗಳಿವೆ.ಇಂತಹ ಸಮಯದಲ್ಲಿ ವಿಧ್ಯಾರ್ಥಿಗಳನ್ನೂ ಮತ್ತೂ ಗೊಂದಲಕ್ಕೀಡು ಮಾಡಿರುವುದು ಆನ್ಲೈನ್ ಕ್ಲಾಸಸ್.

ರೋಗ ಹೇಗೆ ಹಬ್ಬುತ್ತಿದೆ.ಅದನ್ನು ತಡೆಯುವುದು ಹೇಗೆ. ಕೆಲಸವಿಲ್ಲದ ಈ ಸಮಯದಲ್ಲಿ ಹೊಟ್ಟೆಹೊರೆಯುವುದು ಹೇಗೆ ಎಂಬಿತ್ಯಾದಿ ಗೊಂದಲಗಳ ನಡುವೆ ಮಕ್ಕಳು ಈಗ ಮೊಬೈಲ್ ಕೊಂಡುಕೊಳ್ಳುವುದು ಹೇಗೆ,ಅದಕ್ಕೆ ರಿಚಾರ್ಜ್ ಮಾಡಿಸಲು ಯಾರಲ್ಲಿ ಬೇಡುವುದು,ನೆಟ್ವರ್ಕ್ ಹುಡುಕಲು ಎಲ್ಲಿಗೆ ಹೋಗುವುದು.ಪದೇ ಪದೇ ಕರೆಂಟ್ ಹೋಗುವ ನಡುವೆ ಚಾರ್ಜ್ ಉಳಿಸಿಕೊಳ್ಳುವುದು ಹೇಗೆ ಎಂಬ ಗೊಂದಲದಲ್ಲಿ ಒದ್ದಾಡುವಂತಾಗಿದೆ.ಎಲ್ಲರ ಬಳಿಯೂ ಮೊಬೈಲ್ ಇದೆ ಮತ್ತು ಲಾಕ್ಡೌನ್ ಸಂದರ್ಭದಲ್ಲೂ ರಿಚಾರ್ಜ್ ಮಾಡಿಸಲು ಮಕ್ಕಳ ಬಳಿ ಹಣವಿದೆ ಎಂಬುದನ್ನು ಇವರು ಹೇಗೆ ನಿರ್ಧರಿಸಿದರೋ ಅರ್ಥವಾಗುವುದಿಲ್ಲ.ಆನ್ಲೈನ್ನಲ್ಲಿ ಹೆಚ್ಚು ತರಗತಿಗಳನ್ನು ತೆಗೆದುಕೊಳ್ಳುವುದು ಸಾಧ್ಯವಿಲ್ಲ.ಜೂಮ್(zoom)ನಂತಹ ಆ್ಯಪ್ಗಳಲ್ಲೂ ಹೆಚ್ಚೆಂದರೆ 40 ನಿಮಿಷ ತರಗತಿಯನ್ನು ನಡೆಸಬಹುದು.40 ನಿಮಿಷದಲ್ಲೂ ನೆಟ್ವರ್ಕ್ ಸಮಸ್ಯೆಯಿಂದಾಗಿ ಉಪನ್ಯಾಸಕರು ಹೇಳಿದ್ದು ವಿಧ್ಯಾರ್ಥಿಗಳಿಗೆ ಕೇಳುವುದಿಲ್ಲ.

ವಿಧ್ಯಾರ್ಥಿಗಳು ಹೇಳಿದ್ದು ಉಪನ್ಯಾಸಕರಿಗೆ ಕೇಳುವುದಿಲ್ಲ.ಹೀಗಾಗಿ ಉಪನ್ಯಾಸಕರು ತರಗತಿಗಳ ಬದಲಾಗಿ ಅಸೈನ್ಮೆಂಟ್ಗಳನ್ನು ಬರೆಯಿಸುತ್ತಿದ್ದಾರೆ.ದಿನಕ್ಕೊಂದು ಅಸೈನ್ಮೆಂಟ್ ಒಂದೊಂದು ಸಬ್ಜೆಕ್ಟ್ನಿಂದ ಎಂದರೆ ದಿನಕ್ಕೆ 5-6 ಅಸೈನ್ಮೆಂಟ್ ಎಲ್ಲರೂ ನಾಳೆ ಸಬ್ಮಿಟ್ ಮಾಡಿ ಅನ್ನುವವರೆ.ಕಾಟಚಾರಕ್ಕೆ ಬರೆದದ್ದು ತಲೆಗೆ ಹಿಡಿಯುವುದಿಲ್ಲ ಅನ್ನುವ ಸರಳ ವಿಚಾರವನ್ನೂ ಇವರು ಮರೆತುಬಿಟ್ಟಿದ್ದಾರೆಯೇ ಅರ್ಥವಾಗುವುದಿಲ್ಲ ನನಗೆ.ಅಲ್ಲದೆ ಅನ್ಲೈನ್ ಕ್ಲಾಸ್ ಅಂದ ತಕ್ಷಣ ವಿಧ್ಯಾರ್ಥಿಗಳು ಎಷ್ಟು ಗೊಂದಲಕ್ಕೊಳಗಾಗಿದ್ದಾರೋ ಉಪನ್ಯಾಸಕರೂ ಅಷ್ಟೇ ಗೊಂದಲಕ್ಕೊಳಗಾಗಿದ್ದಾರೆ.ದಿನಕ್ಕೊಂದು ಆ್ಯಪ್ಗಳನ್ನು ಪರಿಚಯಿಸುತ್ತಾರೆ.ಗೊತ್ತಿಲ್ಲದ ಹೊಸ ಆ್ಯಪ್ನಲ್ಲಿ ಯಾವುದು ಎಲ್ಲಿ ಎನ್ನುವುದೇ ಅರ್ಥವಾಗದೆ ಉಪನ್ಯಾಸಕರು ನೀಡಿದ ಮಾರ್ಗದರ್ಶನ ಬಳಕೆಯಾಗದೇ ಉಳಿದುಬಿಡುತ್ತದೆ.ಮಾನಸಿಕ ಕಿರಿಕಿರಿ ಪ್ರಾರಂಭವಾಗುತ್ತದೆ.ಈ ಸಂದರ್ಭದಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಿರುವುದು ನೋಡ್ಸ್ ಮತ್ತು ಆತ್ಮಸ್ಥೈರ್ಯ.ಹೀಗೆ ಜೀವ ತಿನ್ನುವುದನ್ನು ಬಿಟ್ಟು ಉಪನ್ಯಾಸಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು.ಅವರ ಸಮಸ್ಯೆಗಳನ್ನು ಅರ್ಥೈಸಬೇಕು.ಒಂದೆರಡುಬಾರಿಗಾದರೆ ನೆರೆಮನೆಯವರ ಮೊಬೈಲನ್ನಾದರೂ ಬಳಸಿಕೊಳ್ಳಬಹುದು.ಇಡೀ ದಿನ ಮೊಬೈಲ್ ಕಯ್ಯಲ್ಲೇ ಇರಬೇಕೆಂದರೆ ಕರೆಂಟ್ ಇಲ್ಲದ,ಕರೆನ್ಸಿ ಇಲ್ಲದ ಈ ಸಮಯದಲ್ಲಿ ಒತ್ತಡದ ಮಾತಾಗುತ್ತದೆ.ದಯವಿಟ್ಟು ಈ ಬಗ್ಗೆ ಗಮನ ಹರಿಸಿ.ಹೊಟ್ಟೆಗೂ ಇಲ್ಲದೆ ಈ ಸಮಯದಲ್ಲಿ ನೆಮ್ಮದಿಯನ್ನೂ ಕಿತ್ತುಕೊಳ್ಳುವುದು ಬೇಡ.ಆನ್ಲೈನ್ ತರಗತಿಗಳಿಗೆ ಹೆದರಿ ವಿಧ್ಯಾರ್ಥಿ/ನಿ ಆತ್ಮಹತ್ಯೆ ಎನ್ನುವ ಸನ್ನಿವೇಶ ಎದುರಾಗುವ ಮುನ್ನ ದಯವಿಟ್ಟು ಇದನ್ನು ಸರಿಪಡಿಸಿ.

ಓರ್ವ ಗ್ರಾಮೀಣ ವಿದ್ಯಾರ್ಥಿನಿ

Leave a Reply

Your email address will not be published. Required fields are marked *

error: Content is protected !!