ತೈಲ ಬೆಲೆ ಏರಿಕೆ ಕಂಪನಿಗಳಿಗೆ ಹೊರೆ: ಜನಸಾಮಾನ್ಯ ಸ್ವಲ್ಪ ನಿರಾಳ
ನವದೆಹಲಿ : ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್‌ಗೆ ₹ 10 ಮತ್ತು ಡೀಸೆಲ್ ಮೇಲಿನ ಸುಂಕ ಲೀಟರ್‌ಗೆ ₹ 13 ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ತೈಲ ಕಂಪನಿಗಳಿಗೆ ಮಾತ್ರ ಹೊರೆಯಾಗಲಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರೆಲ್‌ಗೆ 30 ಡಾಲರ್ ಆಗಿದ್ದರೂ, ಭಾರತೀಯರು ಒಂದು ಲೀಟರ್ ಪೆಟ್ರೋಲ್‌ಗೆ ₹ 73 ಪಾವತಿ ಮಾಡುತ್ತಿದ್ದಾರೆ. ಅಂದರೆ ಕಚ್ಛಾ ತೈಲ ಬೆಲೆ ಇಳಿಕೆಯಾದರೂ ಮುಂಬರುವ ದಿನಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆ ಕಡಿಮೆಯಾಗುವುದಿಲ್ಲ.
ಅಬಕಾರಿ ಸುಂಕ ಏರಿಕೆಯಾಗಿದ್ದರೂ, ಪಂಪ್‌ನಲ್ಲಿ ಮಾರಾಟವಾಗುವ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ ತೈಲ ದರ ಯಥಾಪ್ರಕಾರ
ಬೆಂಗಳೂರು: ‘ತೈಲದ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿರುವುದು ಜನರ ಮೇಲೆ ಪರಿಣಾಮ ಬೀರದು. ರಾಜ್ಯದಲ್ಲಿ ತೈಲ ದರ ಯಥಾಪ್ರಕಾರ ಇರಲಿದೆ’ ಎಂದು ಅಖಿಲ ಕರ್ನಾಟಕ ಪೆಟ್ರೊಲಿಯಂ ಟ್ರೇಡರ್ಸ್ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ ತಿಳಿಸಿದರು. ‘ಲಾಕ್‌ಡೌನ್ ವೇಳೆ ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ತೈಲದ ಸಂಗ್ರಹವಿದೆ. ಕೇಂದ್ರ ಸುಂಕ ಏರಿಕೆ ಮಾಡಿರುವುದು ತೈಲ ಕಂಪನಿಗಳಿಗೆ ಅನ್ವಯ ಆಗುತ್ತದೆ. ಗ್ರಾಹಕರಿಗೆ ಯಾವುದೇ ಪರಿಣಾಮ ಬೀರದು. ರಾಜ್ಯ ಸರ್ಕಾರ ಏನಾದರೂ ಸುಂಕ ಹೆಚ್ಚಳ ಮಾಡಿದರೆ ಮಾತ್ರ ಗ್ರಾಹಕರಿಗೆ ಪರಿಣಾಮ ಬೀರಲಿದೆ’ ಎಂದರು.
ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಾದ ಕಾರಣ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದು ಇದರಿಂದಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹1.6 ಲಕ್ಷ ಕೋಟಿ ಆದಾಯ
ಗಳಿಸುವುದೆಂದು ನಿರೀಕ್ಷಿಸಲಾಗಿದೆ.
ಮಂಗಳವಾರ ಸರ್ಕಾರವು ಪೆಟ್ರೋಲ್‌ನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹10, ಡೀಸೆಲ್ ಲೀಟರ್‌ಗೆ ₹13 ಹೆಚ್ಚಿಸಿದೆ.ಅಂತರರಾಷ್ಟ್ರೀಯ ತೈಲ ಬೆಲೆಗಳು ಎರಡು ದಶಕಗಳ ಕನಿಷ್ಟ ಮಟ್ಟಕ್ಕೆ ಇಳಿದಿರುವುದರಿಂದ ಇದರ ಲಾಭವನ್ನು ಸರ್ಕಾರ ಪಡೆಯಲಿದೆ. ಇದು ಎರಡು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಎರಡನೇ ಅವಧಿಗೆ ಅಬಕಾರಿ ಸುಂಕ ಏರಿಕೆ ಮಾಡಿದೆ.
ಕೊರೋನ ಸೋಂಕು ಪರಿಣಾಮ ಲಾಕ್‌ಡೌನ್ ವಿಧಿಸಿರುವ ಪ್ರಯಾಣ ನಿರ್ಬಂಧದಿಂದಾಗಿ ಬಳಕೆಯ ಕುಸಿತವನ್ನು ಗಮನಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಉಳಿದ 11 ತಿಂಗಳಲ್ಲಿ (ಏಪ್ರಿಲ್ 2020 ರಿಂದ ಮಾರ್ಚ್ 2021 ರವರೆಗೆ) ಲಾಭ ₹1.6 ಲಕ್ಷ ಕೋಟಿ ಗಳಿಸಲು ಸಹಾಯವಾಗಲಿದೆ ಎನ್ನಲಾಗಿದೆ. ಮಾರ್ಚ್ 14ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ₹3 ಹೆಚ್ಚಳದಿಂದ ವಾರ್ಷಿಕ ಆದಾಯ ₹39,000ಕೋಟಿ ಎಂದು ನಿರೀಕ್ಷಿಸಲಾಗಿತ್ತು. ಈಗ ಅತಿ ಹೆಚ್ಚು ಅಂದರೆ ₹10 ಏರಿಕೆ ಮಾಡಿರುವುದರಿಂದ ಸರ್ಕಾರವು ವಾರ್ಷಿಕ ₹2ಲಕ್ಷ ಕೋಟಿ ಆದಾಯಗಳಿಸಲಿದೆ ಎನ್ನಲಾಗಿದೆ.