ಶಬರಿಮಲೆ ದೇಗುಲವನ್ನು ಮುಟ್ಟುವ ಶಕ್ತಿ ಯಾರಿಗೂ ಬರಬಾರದು: ಪಲಿಮಾರುಶ್ರೀ
ಉಡುಪಿ: ಶಬರಿಮಲೆಯಲ್ಲಿ ಪರಂಪರೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಂಪ್ರದಾಯ, ನಿಯಮಗಳನ್ನು ಕೊನೆಯ ತನಕ ಕಾಪಾಡಿಕೊಂಡು ಬರಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಉಡುಪಿ ಜಿಲ್ಲಾ ಶ್ರೀಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ವತಿಯಿಂದ ಶ್ರೀ ಅಯ್ಯಪ್ಪ ಭಕ್ತರ ಸಂಕೀರ್ತನಾ ಶೋಭಾಯಾತ್ರೆಯ ಅಂಗವಾಗಿ ಕೃಷ್ಣ ಮಠದ ರಥಬೀದಿಯಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಬರಿಮಲೆ ದೇಗುಲವನ್ನು ಮುಟ್ಟುವ ಶಕ್ತಿ ಯಾರಿಗೂ ಬರಬಾರದು. ದೇವಸ್ಥಾನಗಳೇ ಇಡೀ ಹಿಂದೂ ಸಮಾಜ ಮತ್ತು ಹಿಂದೂಸ್ತಾನವನ್ನು ಆಳುವ ಕಾಲ ಆದಷ್ಟು ಬೇಗ ಬರಬೇಕು ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ಪ್ರಮುಖ ಕೇಶವ ಬಂಗೇರ ಮಾತನಾಡಿದರು.ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್‌ನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್, ರಾಜ್ಯಾಧ್ಯಕ್ಷ ವಿ.ಕೃಷ್ಣಪ್ಪ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಎಸ್.ಎನ್. ಕೃಷ್ಣಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ. ಜಿಲ್ಲಾ ಸಮಿತಿಯ ಗಣೇಶ್ ಕೋತ್ವಾಲ್, ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್ ಮಲ್ಪೆ, ಬಾಲಕೃಷ್ಣ ಗುರುಸ್ವಾಮಿ ಕಾರ್ಕಳ, ಕಾರ್ಯಾಧ್ಯಕ್ಷ ಬಾಲಕೃಷ್ಣ ಗುರುಸ್ವಾಮಿ ಮಲ್ಪೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಹಾವಂಜೆ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಆನಂದ ಪಿ.ಸುವರ್ಣ, ಜಂಟಿ ಕಾರ್ಯದರ್ಶಿ ಕೃಷ್ಣ ಆಚಾರಿ ಮೂಡುಬೆಳ್ಳೆ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ರಾಧಾಕೃಷ್ಣ ಮೆಂಡನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಸಂಕೀರ್ತನಾ ಶೋಭಾಯಾತ್ರೆಗೆ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಬಳಿಕ ಶೋಭಾ ಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ರಥಬೀದಿಯಲ್ಲಿ ಸಮಾಪ್ತಿ ಗೊಂಡಿತು.