ಇನ್ನೂ ಸರಕಾರ ರಚನೆಯಾಗಿಲ್ಲ , ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಪ್ರಾರಂಭವಾಯಿತು ಬಿರುಸಿನ ಪೈಪೋಟಿ!
ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ 2 ದಿನ ಕಳೆದಿಲ್ಲ. ಈಗ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಮೊದಲೇ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ.
ರಾಜ್ಯ ಸರ್ಕಾರದ ಗದ್ದುಗೆ ಹಿಡಿಯಲು ಶಾಸಕರು ನಾ ಮುಂದು ತಾ ಮುಂದು ಅಂತಿದ್ದಾರೆ. ಅದರಲ್ಲೂ ಸರ್ಕಾರ ಪತನಕ್ಕೆ ನಾಂದಿ ಹಾಡಿದ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಶಾಸಕರ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಈಗಾಗಲೇ ಗೋಕಾಕ್‍ನ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಆಗುತ್ತಾರೆ ಅನ್ನೋ ಗಾಸಿಪ್ ಇದೆ. ಇವರ ಜೊತೆ ಮಹಿಳಾ ಕೋಟಾದಡಿ ಶಶಿಕಲಾ ಜೊಲ್ಲೆ, ಲಿಂಗಾಯತ ಕೋಟಾದಡಿ ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಯಾದವ ಸಮಾಜಕ್ಕೆ ಒಂದು ಸಚಿವ ಸ್ಥಾನ ಕೊಡಬೇಕು ಎಂದು ದಾವಣಗೆರೆಯಲ್ಲಿ ಜಿಲ್ಲಾ ಯಾದವ ಸಮಾಜದ ಮುಖಂಡ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ. ಯಾದವ ಸಮುದಾಯದ ಪೂರ್ಣಿಮಾ ಶ್ರೀನಿವಾಸ್ ಚಿತ್ರದುರ್ಗದ ಹಿರಿಯೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಇವರಿಗೆ ಮಹಿಳಾ ಕೋಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಅರವಿಂದ ಬೆಲ್ಲದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ತಂದೆ 4 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಅವರಿಗೆ ಸಚಿವ ಸ್ಥಾನ ದಕ್ಕಿರಲಿಲ್ಲ. ಇದನ್ನ ಪರಿಗಣಿಸಿ ಬೆಲ್ಲದಗೆ ಸಚಿವ ಸ್ಥಾನವನ್ನ ನೀಡಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಇತ್ತ ಕೊಪ್ಪಳದಲ್ಲೂ ಕೂಡ ಪೈಪೋಟಿ ಜೋರಿದೆ. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗುರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾರ್ಯಕರ್ತರು, ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಲ್ಲದೇ ಈ ಭಾಗದ ಹಿಂದುಳಿದ ನಾಯಕ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಒತ್ತಾಯಿಸಿದ್ದಾರೆ. ಹಾವೇರಿಯಲ್ಲಿ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ಕೊಡಿ ಎಂದು ಒತ್ತಾಯಿಸಿದ್ದಾರೆ.