7,8,9ನೇ ತರಗತಿಗೆ ಪರೀಕ್ಷೆ ಇಲ್ಲ: SSLC, ಪಿಯುಸಿ ಪರೀಕ್ಷೆ ಬಗ್ಗೆ ಏ. 14ರ ನಂತರ ನಿರ್ಧಾರ
ಬೆಂಗಳೂರು: ಲಾಕ್‍ಡೌನ್ ಜಾರಿಯಲ್ಲಿರುವ ಕಾರಣ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಕೆಲ ಗೊಂದಲಗಳು ಇವೆ. ಹೀಗಾಗಿ ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್‍ಬುಕ್ ಲೈವ್ ವಿಡಿಯೋ ಮೂಲಕ ಗೊಂದಲಗಳಿಗೆ ಸ್ಪಷ್ಟಣೆ ನೀಡಿದ್ದಾರೆ.
ಪರೀಕ್ಷೆಗಳ ಬಗ್ಗೆ ಮಾತನಾಡಿದ ಸಚಿವರು, 7,8,9, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆ ಕುರಿತು ಇರುವ ಗೊಂದಲಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. 7,8 ಹಾಗೂ 9ನೇ ತರಗತಿಗೆ ಪರೀಕ್ಷೆ ಇಲ್ಲದೆ ನೇರವಾಗಿ ಮುಂದಿನ ತರಗತಿಗೆ ಪಾಸ್ ಮಾಡಿ ಕಳುಹಿಸಲಾಗುತ್ತದೆ.
ಆದರೆ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳ ಹಂತದಲ್ಲಿ ಆಂತರಿಕ ಪರೀಕ್ಷೆ ರೂಪಣಾತ್ಮಕ, ಮತ್ತು ಸಂಕಲನಾತ್ಮಕ ಪರೀಕ್ಷೆ ನಡೆಸಲಾಗಿದೆ. ಅದರ ಆಧಾರದಲ್ಲಿ 9ನೇ ತರಗತಿ ವಿದ್ಯಾರ್ಥಿಗಳನ್ನ 10ನೇ ತರಗತಿಗೆ ಪಾಸ್ ಮಾಡಬೇಕು. ಒಂದು ವೇಳೆ ಶಾಲೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಇದ್ದರೆ ರಜೆ ಅವಧಿಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟ ಉತ್ತಮಗೊಳಿಸಬೇಕು. ಜೂನ್ ಒಳಗೆ ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಂದು ಪರೀಕ್ಷೆ ಕೊಡಬೇಕು. ನಂತರ ಅವರನ್ನು ಪಾಸ್ ಮಾಡುವ ನಿರ್ಧಾರವನ್ನು ಶಾಲೆಗಳು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಲ್ಲ. ಏಪ್ರಿಲ್ 14ರ ನಂತರ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತೆ. ಇತ್ತ ದ್ವಿತೀಯ ಪಿಯುಸಿ ಒಂದು ವಿಷಯದ ಪರೀಕ್ಷೆ ಬಾಕಿ ಇದೆ. ಅದನ್ನೂ ರದ್ದು ಮಾಡಲ್ಲ, ಏಪ್ರಿಲ್ 14ರ ನಂತರ ಆ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ಮಾಡಲಾಗುತ್ತೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆಯೇ ವೇಳಾಪಟ್ಟಿ ಸಿದ್ಧ ಮಾಡಲಾಗುತ್ತೆ. ಏಪ್ರಿಲ್ 14ರ ನಂತರ ಪರಿಸ್ಥಿತಿ ನೋಡಿಕೊಂಡು ವೇಳಾಪಟ್ಟಿ ಪ್ರಕಟ ಮಾಡಲಾಗುತ್ತೆ ಎಂದು ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದರು.
ಅಷ್ಟೇ ಅಲ್ಲದೇ ಪರೀಕ್ಷೆ ಇಲ್ಲ ಎಂದು ಮಕ್ಕಳು ಹೊರಗೆ ಓಡಾಡೋ ಹಾಗೆ ಇಲ್ಲ. ಕೊರೊನಾ ಇದೆ ಮನೆಯಲ್ಲಿ ಇರಿ. ಪರೀಕ್ಷೆ ಇಲ್ಲವೆಂದು ಸುಮ್ಮನೆ ಇರಬೇಡಿ, ನಿಮಗೆ ಹಲವು ಒಳ್ಳೆಯ ವಿಷಯಗಳನ್ನು ಕಲಿಯಲು ಅವಕಾಶವಿದೆ. ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ದೇಶ ಕೊರೊನಾ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಸಹಕರಿಸಿ ಎಂದು ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.