ಅಜೆಕಾರು ಆಸ್ಪತ್ರೆಗಿಲ್ಲ 108 ಅಂಬುಲೆನ್ಸ್ ಭಾಗ್ಯ: ಬಡರೋಗಿಗಳ ಪರದಾಟ

ಕಾರ್ಕಳ: ಕಾರ್ಕಳ ತಾಲೂಕಿನ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 6 ತಿಂಗಳಿನಿಂದ 108 ಅಂಬುಲೆನ್ಸ್ ವಾಹನವಿಲ್ಲದೇ ಗ್ರಾಮೀಣ ಭಾಗದ ಬಡರೋಗಿಗಳು ಗೋಳಾಟ ಅನುಭವಿಸುವಂತಾಗಿದೆ.

ಕಾರ್ಕಳ ತಾಲೂಕಿನ ಹೋಬಳಿ ಕೇಂದ್ರವಾಗಿರುವ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಕೆರ್ವಾಶೆ, ಹೆರ್ಮುಂಡೆ, ಹಿರ್ಗಾನ, ದೊಂಡೇರಂಗಡಿ,ಕಡ್ತಲ,ವರಂಗ ಮುಂತಾದ ಗ್ರಾಮೀಣ ಭಾಗದ ನೂರಾರು ಬಡರೋಗಿಗಳಿಗೆ ವರದಾನವಾಗಿದ್ದ 108 ಅಂಬುಲೆನ್ಸ್ ವಾಹನ ಸಧ್ಯ ಅಜೆಕಾರಿನಲ್ಲಿ ಲಭ್ಯವಿಲ್ಲದೇ ಅದೆಷ್ಟೋ ಬಡವರು ಬೇರೆ ವ್ಯವಸ್ಥೆಯಿಲ್ಲದೇ ಅನಿವಾರ್ಯವಾಗಿ ಖಾಸಗಿ ಆಂಬುಲೆನ್ಸ್‌ಗಳನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ 6 ತಿಂಗಳ ಹಿಂದೆ ಕಾರ್ಕಳದ ಬೈಲೂರಿನಲ್ಲಿ ಅಜೆಕಾರಿನ 108 ವಾಹನ ಅಪಘಾತಕ್ಕೀಡಾಗಿದ್ದ ನಂತರ ಈವರೆಗೂ ಬದಲಿ 108 ವಾಹನವನ್ನು ಆರೋಗ್ಯ ಇಲಾಖೆ ನೀಡಿಲ್ಲ.ಅಜೆಕಾರನ್ನು ಹೊರತುಪಡಿಸಿದೆ, ಹೆಬ್ರಿ, ಪೆರ್ಡೂರು, ಬಜಗೋಳಿ ಹಾಗೂ ಕಾರ್ಕಳದಲ್ಲಿ 108 ವಾಹನ ಸೌಲಭ್ಯವಿದೆ.

ಅಜೆಕಾರು ಸುತ್ತಮುತ್ತ ಏನಾದರೂ ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ 108 ಉಚಿತ ಅಂಬುಲೆನ್ಸ್ ವಾಹನಸೇವೆ ಅವಶ್ಯಕತೆಯಿದ್ದಲ್ಲಿ 20 ಕಿ.ಮೀ ದೂರದಿಂದ ಅಂಬುಲೆನ್ಸ್ ಬರಬೇಕಾಗುತ್ತದೆ. ಇದಲ್ಲದೇ ಕೆಲಸಂದರ್ಭದಲ್ಲಿ ವಾಹನಗಳು ಬೇರೆಡೆ ಹೋದಲ್ಲಿ ತೀರಾ ರೋಗಿಗಳು ಗಂಟೆಗಟ್ಟಲೆ ಅಂಬುಲೆನ್ಸ್ ಕಾಯುವ ಪರಿಸ್ಥಿತಿ ಎದುರಾಗಿದೆ.ಮಾತ್ರವಲ್ಲದೇ ಹೊರಗಡೆಯಿಂದ ಬರುವ ಅಂಬುಲೆನ್ಸ್ ಚಾಲಕರಿಗೆ ಊರಿನ ಮಾಹಿತಿಯಿಲ್ಲದ ಹಿನ್ನಲೆಯಲ್ಲಿ ರೋಗಿಗಳನ್ನು ತಲುಪುವುದು ಕಷ್ಟವಾಗುತ್ತದೆ.

ತಾತ್ಕಾಲಿಕವಾಗಿ ಬದಲಿ ವಾಹನ ನಿಯೋಜನೆ:

ಅಜೆಕಾರು ಆರೋಗ್ಯ ಕೇಂದ್ರದ ವಾಹನ ಕಳೆದ 3 ತಿಂಗಳ ಹಿಂದೆ ಅಪಘಾತಕ್ಕೀಡಾಗಿ ದುರಸ್ತಿಗೆ ಕಳುಹಿಸಲಾಗಿದೆ. ಆದ್ದರಿಂದ ಅಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ಅಜೆಕಾರಿಗೆ ತಾತ್ಕಾಲಿಕವಾಗಿ ಬದಲಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು ಇಂದೇ ಅದನ್ನು ಅಜೆಕಾರಿಗೆ ಕಳುಹಿಸಿಕೊಡಲಾಗುತ್ತದೆ. ಅಪಘಾತವಾಗಿದ್ದ ಅಂಬುಲೆನ್ಸ್ ದುರಸ್ತಿಗೆ ಸರಕಾರ ಮಟ್ಟದಲ್ಲಿ ಅನುಮತಿ ಸಿಗಬೇಕಿದ್ದು ಅದು ದುರಸ್ತಿಯಾದ ಸೇವೆಗೆ ಲಭ್ಯವಾಗಲಿದೆ ಎಂದು ಇಎಂಆರ್‌ಐ ನ ಜಿಲ್ಲಾ ಮ್ಯಾನೇಜರ್ ಮುನೇಶ್ ಸ್ಪಷ್ಟಪಡಿಸಿದ್ದಾರೆ.

ಬಡರೋಗಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಅರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ೧೦೮ ಅಂಬುಲೆನ್ಸ್ ವಾಹನವನ್ನು ದುರಸ್ತಿಗೊಳಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!