ಉಪ ಚುನಾವಣೆ ಬಳಿಕ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ದೇವೇಗೌಡ
ಬೆಳಗಾವಿ: ಉಪ ಚುನಾವಣೆ ಬಳಿಕ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಪಕ್ಷಗಳಿಂದ ಜೆಡಿಎಸ್ ಸಾಕಷ್ಟು ನೋವು ಅನುಭವಿಸಿದೆ. ಚುನಾವಣೆ ನಂತರ ಮೈತ್ರಿ ಕುರಿತ ಊಹೆಯನ್ನಾಧರಿಸಿದ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದೆಂದು ತಾಕೀತು ಮಾಡಿದರು.
ಕಾಂಗ್ರೆಸ್ ನೊಂದಿಗೆ ಜೆಡಿಎಸ್ ಕೈ ಜೋಡಿಸದಿದ್ದರೆ ಏಕೆ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ 105 ಸ್ಥಾನಗಳನ್ನು ಹೊಂದಿದೆ. ನಾವು ಯಾವುದೇ ಪಕ್ಷಕ್ಕೂ ಬೆಂಬಲ ವ್ಯಕ್ತಪಡಿಸಿದೆ ಪ್ರತಿಪಕ್ಷ ಸಾಲಿನಲ್ಲಿ ಕುಳಿತುಕೊಳ್ಳುವುದಾಗಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುಲಾಮ್ ನಬಿ ಅಜಾದ್ ಅವರನ್ನು ಕಳುಹಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದಾಗ್ಯೂ, ಮೈತ್ರಿ ನಿಯಮಗಳನ್ನು ಪಾಲಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು ಎಂದು ಆರೋಪಿಸಿದರು.