ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ರಾತ್ರಿ ಹೈಫೈ ಪಾರ್ಟಿ!: ಕೇವಲ ನೋಟಿಸ್ ನೀಡಿ ಕಳುಹಿಸಿದ ಕೋಸ್ಟಲ್ ಪೊಲೀಸ್

ಉಡುಪಿ: ಇಡೀ ಜಗತ್ತೇ ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿದ್ದರೆ, ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಲ್ಲಿ ರಾತ್ರಿ ಹೈಫೈ ಪಾರ್ಟಿ ನಡೆದಿದೆ!
ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಹಿತ 7 ಮಂದಿ ಮಲ್ಪೆಯಿಂದ 8 ಕಿ.ಮೀ. ದೂರದಲ್ಲಿ ಸಮುದ್ರದ ಮಧ್ಯೆ ಇರುವ ಸೈಂಟ್ ಮೇರೀಸ್ ದ್ವೀಪದಲ್ಲಿ ಶನಿವಾರ ರಾತ್ರಿ ಗುಂಡು ಪಾರ್ಟಿ ನಡೆಸಿದ್ದಾರೆ. 


ಶನಿವಾರ ರಾತ್ರಿ 9.30ಕ್ಕೆ ದ್ವೀಪದಲ್ಲಿ ವಿದ್ಯುತ್ ದೀಪಗಳ ಬೆಳಕು ಕಾಣುತ್ತಿತ್ತು. ಬೆಳಕು 11 ಗಂಟೆಯ ವರೆಗೂ ಒಂದೇ ಸ್ಥಳದಲ್ಲಿರುವುದನ್ನು ಗಮನಿಸಿದ ಸ್ಥಳೀಯರು, ರಾತ್ರಿ 11 ಗಂಟೆಗೆ ಮಲ್ಪೆ ಪೊಲೀಸ್ ಠಾಣೆ ಹಾಗೂ ಕರಾವಳಿ ಕಾವಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ದ್ವೀಪದಲ್ಲಿ ಉರಿಯುತ್ತಿದ್ದ ದೀಪ ಆರಿಸಲಾಯಿತು. 

ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಉಡುಪಿ ನೋಂದಣಿಯ ಕೆಎ 20 ಎಂಎ 1239 ಮತ್ತು ಮಂಗಳೂರು ನೋಂದಣಿಯ ಕೆಎ 19 ಎಂಜಿ 1895 ಕಾರುಗಳನ್ನು ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಕಾರು ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಅವರಿಗೆ ಸೇರಿದ್ದಾದರೆ, ಇನ್ನೊಂದು ನಿರ್ಮಿತಿ ಕೇಂದ್ರದ ಸಚಿನ್ ಅವರದ್ದಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಲ್ಪೆ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಪರಿಶೀಲಿಸಿ, ಸುದೇಶ್ ಅವರಿಗೆ ದೂರವಾಣಿ ಕರೆ ಮಾಡಿದಾಗ, ತಾನು ಸೈಂಟ್ ಮೇರೀಸ್ ದ್ವೀಪದಲ್ಲಿ ಇರುವುದನ್ನು ಸುದೇಶ್ ಒಪ್ಪಿಕೊಂಡಿದ್ದರು.

ತನ್ನೊಂದಿಗೆ ನಾಲ್ಕೈದು ಜನರಿದ್ದು, ದ್ವೀಪದಲ್ಲಿರುವ ಪರಿಕರಗಳನ್ನು ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ವಾಪಸ್ ಬರಲು ತಿಳಿಸಿದಾಗ ಹೈಟೈಡ್ ಇದೆ, ಕಡಿಮೆ ಆದಾಗ ವಾಪಸ್ ಬರುವುದಾಗಿ ತಿಳಿಸಿದ್ದರು. ರಾತ್ರಿ 1ಗಂಟೆವರೆಗೆ ವಾಪಸ್ ಬರದಿರುವುದರಿಂದ ಕರಾವಳಿ ಕಾವಲು ಪೊಲೀಸ್ ಗಸ್ತು ಬೋಟ್ ಭಾರ್ಗವದಲ್ಲಿ ತೆರಳಿದ್ದು, ದ್ವೀಪದಲ್ಲಿ ಮದ್ಯಪಾನ ಮಾಡಿ, ಊಟ ಮಾಡಿ ಮಲಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 3.15ಕ್ಕೆ ಎಲ್ಲರನ್ನು ಅಲ್ಲಿಂದ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಗೆ ಕರೆತರಲಾಗಿದೆ ಎಂದು ಸಿಎಸ್ಪಿ ಪೊಲೀಸರು ತಿಳಿಸಿದ್ದಾರೆ.


ಈ ಕುರಿತು ನಗರಸಭೆ ವಡಭಾಂಡೇಶ್ವರ ವಾರ್ಡ್ ಚುನಾಯಿತ ಸದಸ್ಯ ಯೋಗೀಶ್ ಸಾಲ್ಯಾನ್ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
ಘಟನೆಯ ಬಗ್ಗೆ ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಆರ್. ಮಾತನಾಡಿ, ಏಳು ಮಂದಿ ಶನಿವಾರ ತಡರಾತ್ರಿ ಸೈಂಟ್ ಮೇರೀಸ್ ದ್ವೀಪದಲ್ಲಿ ವಶಕ್ಕೆ ಪಡೆಯಲಾಗಿದೆ. ಮಲ್ಪೆ ಬೀಚ್ ಅಭಿವೃದ್ಧಿಯ ನಿರ್ವಾಹಕರೇ ಆಗಿರುವುದರಿಂದ ಸಮಿತಿಯ ಕರಾರಿನಲ್ಲಿ ಏನು ಅವಕಾಶ ಅವರಿಗಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.


ಸಾರ್ವಜನಿಕರಿಗೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವುದು ಮತ್ತು ರಾತ್ರಿ ಅಲ್ಲಿ ವಾಸ್ತವ್ಯ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಇದೀಗ ಜಿಲ್ಲಾಧಿಕಾರಿಯವರೇ ಅಧ್ಯಕ್ಷರಾಗಿರುವ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಗುತ್ತಿಗೆ ನೀಡಿರುವ ಮಲ್ಪೆ ಬೀಚ್ ನಿರ್ವಾಹಕನ ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಹಿತ ಏಳು ಮಂದಿ ದ್ವೀಪದಲ್ಲಿ ಗುಂಡು ಪಾರ್ಟಿ ಮಾಡಿ, ರಾತ್ರಿ ಉಳಿದುಕೊಂಡಿದ್ದು, ಏನು ಕ್ರಮ ಜರಗಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

1 thought on “ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ರಾತ್ರಿ ಹೈಫೈ ಪಾರ್ಟಿ!: ಕೇವಲ ನೋಟಿಸ್ ನೀಡಿ ಕಳುಹಿಸಿದ ಕೋಸ್ಟಲ್ ಪೊಲೀಸ್

Leave a Reply

Your email address will not be published. Required fields are marked *

error: Content is protected !!