ಸಾಲಿಗ್ರಾಮ ಶ್ರೀ ಗುರುನರಸಿಂಹನಿಗೆ ನೂತನ ರಾಜಗೋಪುರ ಸಮರ್ಪಣೆ
ಸಾಲಿಗ್ರಾಮ: ಬಹು ನಿರೀಕ್ಷತ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ರಾಜಗೋಪುರ ಸಮರ್ಪಣೆ ಕಾರ್ಯಕ್ರಮ ಇಂದು ನಡೆಯಿತು. ರಾಜಗೋಪುರವು 50 ಅಡಿ ಎತ್ತರ, 27 ಅಡಿ ಅಗಲವಾಗಿದ್ದು 5 ಅಂತಸ್ತುಗಳಲ್ಲಿ ನಿರ್ಮಾಣವಾಗಿದೆ.
ರಾಜಗೋಪುರ ಮೇಲೆ ವಿಗ್ರಹಗಳ ಜೋಡಣೆ ಮತ್ತು ಕಲಾತ್ಮಕ ಕುಸುರಿ ಕೆಲಸವು ನಡೆದಿದ್ದು ಮತ್ತಷ್ಟು ಸುಂದರವಾಗಿ ಕಾಣಿಸುವಂತೆ ಸಿದ್ಧವಾಗಿದೆ. ತಮಿಳುನಾಡು ಮೂಲದ ಶಿಲ್ಪಿ ಪ್ರಭಾಕರನ್ ರಚಿಸಿರುವುದು ವಿಶೇಷ. ಒಟ್ಟು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರಾಜಗೋಪುರ ತಯಾರಾಗಿದ್ದು ಭಕ್ತರನ್ನು ಆಕರ್ಷಿಸುತ್ತಿದೆ.
ರಾಜಗೋಪುರದ ಉದ್ಘಾಟನೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ನಾಂದಿ, ನವಗ್ರಹಹೋಮ, ಗಣಪತಿ ಮೂಲ ಮಂತ್ರ ಜಪ. ಸಂಜೆ ವಾಸ್ತುಪೂಜೆ ಸೇರಿದಂತೆ ಅಷ್ಟಾವಧಾನ ಸೇವೆ, ನವೋತ್ತರ ಶತ ಕಲಶ ಸ್ಥಾಪನೆ ನಡೆಯಿತು. ಯಕ್ಷ ಪ್ರಿಯರಿಗಾಗಿ ರಾತ್ರಿ ಶ್ರೀಗುರುಪ್ರಸಾಧಿತ ಯಕ್ಷಗಾನ ಮೇಳದವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.
ಇಂದು ಬೆಳಿಗ್ಗೆ ಸಹಸ್ರ ನಾಲಿಕೇರಿ ಗಣಯಾಗದಿಂದ ಮೊದಲುಗೊಂಡು ಶ್ರೀಗುರುನರಸಿಂಹ ದೇವರಿಗೆ ಬ್ರಹ್ಮ ಕಲಾಭಿಷೇಕ, ಮಹಾಪೂಜೆ ನಡೆಯಿತು. ರಾಜ ಗೋಪುರ ಸಮರ್ಪಣೆ ಅಂಗವಾಗಿ ವಿಶೇಷ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀದೇವಳದ ಅರ್ಚಕರಾದ ವೇ.ಮೂ. ಜನಾರ್ದನ ಅಡಿಗರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು, ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಅನಂತಪದ್ಮನಾಭ ಐತಾಳ, ಕೋಶಾಧಿಕಾರಿ ಶ್ರೀ ಪ್ರಸನ್ನ ತುಂಗ, ಶಿಲ್ಪಿ ಎಂ. ಪ್ರಭಾಕರನ್ ಹಾಗೂ ಊರ ಹತ್ತು ಸಮಸ್ತರು, ಗೌರಾವಾನ್ವಿತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.