ಕೃಷಿಕರ ಬೇಡಿಕೆಗಳ ನಿರ್ಲಕ್ಷ್ಯ: ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಿದ ರೈತರು

ಉಡುಪಿ: ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ, ಸಮಸ್ಯೆಗಳ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆಯ ವಿರುದ್ಧ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಕೃಷಿ ಉತ್ಪನ್ನಗಳ ಮುಕ್ತ ಆಮದು ನೀತಿ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಬೇಕು. ಕೃಷಿ ಯಂತ್ರೋಪಕರಣ
ಗಳ ಖರೀದಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕೃಷಿ ಪಿಂಚಣಿ ಯೋಜನೆಯನ್ನು 60 ವರ್ಷ ಮೇಲ್ಪಟ್ಟ ಕೃಷಿಕರಿಗೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.


ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಭಟ್‌ ಕುದಿ ಮಾತನಾಡಿ, ‘ಸರ್ಕಾರ ಬೆಂಬಲ ಬೆಲೆಯ ಹೆಸರಿನಲ್ಲಿ ರೈತರನ್ನು ಶೋಷಣೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಉತ್ಪನ್ನ ಗಳ ಬೆಲೆ ಏರಿಕೆಯಾಗಿದ್ದರೂ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೃಷಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದು, ಕೃಷಿಕರ ಸಮಸ್ಯೆಗಳಿಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾ
ಗಬಹುದು‘ ಎಂದು ಎಚ್ಚರಿಸಿದರು.

ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಕುಮ್ಕಿ ಹಕ್ಕನ್ನು ರದ್ದುಗೊಳಿಸಬಾರದು. ಬೆಳೆ ಸಮೀಕ್ಷೆಯ ವಿವರಗಳನ್ನು ರೈತರಿಗೂ ನೀಡಬೇಕು. ಬೆಳೆ ಪರಿಹಾರದ ನಿಯಮಗಳನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್‌, ದಿನೇಶ್‌ ಶೆಟ್ಟಿ ಹೆರ್ಗ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಭೋಜ ಶೆಟ್ಟಿ ಚೇರ್ಕಾಡಿ, ಸುಬ್ರಹ್ಮಣ್ಯ ಶ್ರೀಯಾನ್‌ ಪೆರಂಪಳ್ಳಿ, ಪ್ರಭಾಕರ ಶೆಟ್ಟಿ ಚೇರ್ಕಾಡಿ, ಭಾರತಿ ಶೆಟ್ಟಿ ಅಂಜಾರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಮನವಿಯನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಬರದೇ ಇದ್ದುದರಿಂದ ಆಕ್ರೋಶಗೊಂಡ ರೈತರು, ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಿ, ಸರ್ಕಾರ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ರೈತರು, ಅಲ್ಲೇ ಕೆಲಕಾಲ ಧರಣಿ ನಡೆಸಿದರು. ಬಳಿಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜಗದೀಶ್‌, ಅನುಮತಿ ಇಲ್ಲದೆ ಒಳ ನುಗ್ಗಿದ ರೈತರ ವಿರುದ್ಧ ಅಸಮಾಧಾನ ಹೊರಹಾಕಿದರು. ಮನವಿ ಸ್ವೀಕರಿಸದೇ ಅಲ್ಲಿಂದ ತೆರಳಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು, ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಕಾರನ್ನು ಹೊರಗೆ ಕಳುಹಿಸಿದರು.

ನಂತರ ಕಚೇರಿ ಮುಂಭಾಗಕ್ಕೆ ತೆರಳಿದ ರೈತರನ್ನು ಭೇಟಿಯಾಗಿ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು. ‘ಜಿಲ್ಲಾಡಳಿತ ರೈತಾಪಿ ವರ್ಗವನ್ನು ಎಂದಿಗೂ ಕಡೆಗಣನೆ ಮಾಡುವುದಿಲ್ಲ. ನೀವು ಪ್ರತಿಭಟನೆ ನಡೆಸುವಾಗ ನಿಮ್ಮ ಸಮಯವನ್ನು ತಿಳಿಸಿದರೆ, ಆ ಸಮಯಕ್ಕೆ ಬಂದು ನಾನು ಮನವಿ ಸ್ವೀಕರಿಸುತ್ತೇನೆ’ ಎಂದು ಹೇಳಿದರು.

‘ನಿಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!